ನವದೆಹಲಿ/ಮುಂಬೈ, ಫೆ.19- ದೇಶದ ಆರ್ಥಿಕ ವಲಯವನ್ನೇ ಬೆಚ್ಚಿ ಬೀಳಿಸಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ನ 11,500 ಕೋಟಿ ರೂ.ಗಳ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐ ಮತ್ತಷ್ಟು ತೀವ್ರಗೊಳಿಸಿದೆ.
ಈ ಹಗರಣ ಬೆಳಕಿಗೆ ಬಂದ ಮುಂಬೈನ ಬ್ರ್ಯಾಡಿ ರಸ್ತೆಯಲ್ಲಿರುವ ಪಿಎನ್ಬಿ ಶಾಖಾ ಕಚೇರಿಯನ್ನು ಇಂದು ಬಂದ್ ಮಾಡಿರುವ ಸಿಬಿಐ ಅಧಿಕಾರಿಗಳು ಮತ್ತಷ್ಟು ಮಹತ್ವದ ದಾಖಲೆ ಪತ್ರಗಳು ಮತ್ತು ಮಾಹಿತಿಗಾಗಿ ಜಾಲಾಡುತ್ತಿದ್ದಾರೆ.
ಇದೇ ವೇಳೆ ಸಿಬಿಐನ ಮತ್ತೊಂದು ತಂಡ ವಜ್ರದ ದೊರೆ ಮತ್ತು ಈ ಹಗರಣದ ಪ್ರಮುಖ ರೂವಾರಿ ನಿರವ್ ಮೋದಿ ಒಡೆತನದ ಫೈರ್ ಸ್ಟಾರ್ ಡೈಮಂಡ್ ಕಾಪೆರ್Çರೇಷನ್ನ ಮುಖ್ಯ ಆರ್ಥಿಕ ಅಧಿಕಾರಿ ಮತ್ತು ಮೋದಿ ಸಲಹೆಗಾರ ವಿಫುಲ್ ಅಂಬಾನಿಯನ್ನು ವಶಕ್ಕೆ ತೆಗೆದುಕೊಂಡು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಈ ಸಂಬಂಧ ಈಗಾಗಲೇ ಪಿಎನ್ಬಿ ಬ್ಯಾಂಕ್ನ ಕೆಲವು ಉದ್ಯೋಗಿಗಳು ಮತ್ತು ಸಿಬ್ಬಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮುಂದುವರಿಸಲಾಗಿದೆ.
ತಮ್ಮ ತನಿಖೆಗೆ ಯಾವುದೇ ರೀತಿಯಲ್ಲೂ ಅಡ್ಡಿಯಾಗದಂತೆ ಸಿಬಿಐ ಅಧಿಕಾರಿಗಳು ಇಂದು ಬೆಳಗ್ಗೆ ಮುಂಬೈನ ಬ್ರ್ಯಾಡಿ ರಸ್ತೆಯಲ್ಲಿರುವ, ಹಗರಣ ಬೆಳಕಿಗೆ ಬಂದ ಪಿಎನ್ಬಿ ಶಾಖಾ ಕಚೇರಿಗೆ ದಾವಿಸಿ ಸೀಲ್ ಮಾಡಿ ಜಫ್ತಿ ಮಾಡಿದ್ದಾರೆ.
ಬ್ಯಾಂಕ್ನಲ್ಲಿ ಈ ಹಗರಣಕ್ಕೆ ಸಂಬಂಧಿಸಿದಂತೆ ದೊರೆಯಬಹುದಾದ ಮತ್ತಷ್ಟು ಸುಳಿವು ಮತ್ತು ಮಾಹಿತಿಗಾಗಿ ತೀವ್ರ ಹುಡುಕಾಟ ಮುಂದುವರಿಸಿದ್ದಾರೆ ಎಂದು ಸಿಬಿಐ ಉನ್ನತ ಮೂಲಗಳು ತಿಳಿಸಿವೆ.
ಈ ಮಧ್ಯೆಡೈಮಂಡ್ ಕಿಂಗ್ ನಿರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೂಲಕ ನಡೆಸಿರುವ 11,500 ಕೋಟಿ ರೂ. ಹಗರಣದ ಬೆನ್ನತ್ತಿರುವ ಜಾರಿ ನಿರ್ದೇಶನಾಲಯ ಮತ್ತು ಐಟಿ ಇಲಾಖೆ ಅಧಿಕಾರಿಗಳಿಗೆ ಈ ಅಕ್ರಮದ ವ್ಯಾಪಕತೆ ಮತ್ತಷ್ಟು ವಿಸ್ತಾರವಾಗಿರುವ ಮಾಹಿತಿ ಲಭಿಸಿದ್ದು, ಆ ನಿಟ್ಟಿನಲ್ಲಿ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.
ನಿರವ್ ಮೋದಿ, ಅವರ ಪಾಲುದಾರ ಮತ್ತು ಸಂಬಂಧಿ ಮೆಹುಲ್ ಚೋಕ್ಸಿಯ ಕಂಪೆನಿಗಳು ಹಾಗೂ ದೇಶಾದ್ಯಂತ ಇರುವ 200ಕ್ಕೂ ಅಧಿಕ ಬೇನಾಮಿ ಸಂಸ್ಥೆಗಳ ಮೇಲೆ ಕಣ್ಣಿಟ್ಟಿದ್ದು, ತನಿಖೆಯನ್ನು ವಿಸ್ತರಿಸಿದ್ದಾರೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈವರೆಗೆ ಈ ಹಗರಣಕ್ಕೆ ಸಂಬಂಧಿಸಿದಂತೆ ನಿರವ್ ಒಡೆತನದ ಕಂಪೆನಿಗಳಿಂದ 5674 ಕೋಟಿ ರೂ.ಗಳ ಚಿನ್ನಾಭರಣವನ್ನು ವಶಪಡಿಸಿಕೊಂಡಿದೆ ಹಾಗೂ ಮೋದಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಸಂಬಂಧಪಟ್ಟ 105 ಬ್ಯಾಂಕ್ ಖಾತೆಗಳನ್ನು ಈಗಾಗಲೇ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಭಾರತ ಮತ್ತು ವಿದೇಶಗಳಲ್ಲಿರುವ ಸುಮಾರು 200ಕ್ಕೂ ಹೆಚ್ಚು ನಕಲಿ ಕಂಪೆನಿಗಳ ಮೇಲೆ ಐಡಿ ಮತ್ತು ಐಟಿ ಅಧಿಕಾರಿಗಳು ಕಣ್ಣಿಟ್ಟಿದ್ದು, ಅವುಗಳ ಬಗ್ಗೆ ಮಹತ್ವದ ಮಾಹಿತಿ ಕಲೆ ಹಾಕುತ್ತಿದ್ದಾರೆ.