ಅಕಾಲಿಕ ನಿಧನರಾದ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

ಬೆಂಗಳೂರು, ಫೆ.19- ಅಕಾಲಿಕ ನಿಧನರಾದ ರೈತ ಸಂಘದ ನಾಯಕ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ನಾಳೆಗೆ ಕಲಾಪ ಮುಂದೂಡಲಾಯಿತು.

ವಿಧಾನಸಭೆ:
ಇಂದು ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಪುಟ್ಟಣ್ಣಯ್ಯ ಅವರ ನಿಧನದ ವಾರ್ತೆಯನ್ನು ತಿಳಿಸಿ ವಿಷಾದ ವ್ಯಕ್ತಪಡಿಸಿದರು.
1949 ಡಿಸೆಂಬರ್ 23ರಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿಯಲ್ಲಿ ಜನಿಸಿದ ಪುಟ್ಟಣ್ಣಯ್ಯ ಪದವೀಧರರಾಗಿದ್ದರು. ವೃತ್ತಿಯಲ್ಲಿ ಕೃಷಿಕರಾಗಿದ್ದರು. ಕೂಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಅಪಾರವಾದ ಅರಿವು ಹೊಂದಿದ್ದರು. ವಿದ್ಯಾರ್ಥಿ ದಿಸೆಯಲ್ಲೇ ಬಡವರು ಮತ್ತು ಕೃಷಿ ಕಾರ್ಮಿಕರ ಕಷ್ಟಕಾರ್ಪಣ್ಯಗಳನ್ನು ಬಲ್ಲವರಾಗಿದ್ದರು.
1983ರಲ್ಲಿ ಮಂಡ್ಯ ಜಿಲ್ಲೆಯ ಧೀಮಂತ ನಾಯಕ ಎಸ್.ಡಿ.ಜಯರಾಂ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರಾಗಿ ಸೇರ್ಪಡೆಗೊಂಡರು. ರೈತ ಸಂಘದ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದರು. 1999ರಿಂದ 2012ರವರೆಗೆ ರಾಜ್ಯ ರೈತ ಸಂಘದ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದರು. 1994ರಲ್ಲಿ 10ನೇ ವಿಧಾನಸಭೆಗೆ ಪಾಂಡವಪುರ ಕ್ಷೇತ್ರದಿಂದ ಚುನಾಯಿತರಾಗಿ ಸೇವೆ ಸಲ್ಲಿಸಿದರು.
ತಮ್ಮ ಹಳ್ಳಿ ಸೊಗಡಿನ ವಾಕ್ಚಾತುರ್ಯದಿಂದ ಸದನದಲ್ಲಿ ಉತ್ತಮ ವಾಗ್ಪಟುವಾಗಿ ಗುರುತಿಸಿಕೊಂಡಿದ್ದರು. ರೈತರು, ಕೂಲಿ ಕಾರ್ಮಿಕರು ಸೇರಿದಂತೆ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಅಪಾರ ಜ್ಞಾನ, ಕಳಕಳಿ ಹೊಂದಿದ್ದರು. ಸದನದಲ್ಲಿ ಆ ಎಲ್ಲಾ ವಿಷಯಗಳ ಬಗ್ಗೆ ಮನಮುಟ್ಟುವ ರೀತಿ ವಿಷಯ ಮಂಡಿಸುತ್ತಿದ್ದರು.
2013ರಲ್ಲಿ 14ನೇ ವಿಧಾನಸಭೆಗೆ ಮೇಲುಕೋಟೆ ಕ್ಷೇತ್ರದಿಂದ ಪುನರಾಯ್ಕೆಗೊಂಡು ಶಾಸಕರಾಗಿ ಸಕ್ರಿಯವಾಗಿ ಕೆಲಸ ಮಾಡಿದರು. ಸದಾ ರೈತರಪರವಾಗಿ ಹಸಿರು ಶಾಲು ಧರಿಸಿ ಹೋರಾಟ ಮಾಡುತ್ತಿದ್ದ ಪುಟ್ಟಣ್ಣಯ್ಯ ಅವರ ನಿಧನ ಅಪಾರ ನೋವು ತಂದಿದೆ ಎಂದರು.
ಇದಕ್ಕೆ ಬೆಂಬಲ ವ್ಯಕ್ತಪಡಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಅವರು, ಸದನದ ಕೊನೆಯ ಅವಧಿಯಲ್ಲಿ ಪುಟ್ಟಣ್ಣಯ್ಯ ಅವರ ನಿಧನ ತೀವ್ರ ನೋವು ತಂದಿದೆ. ನಂಜುಂಡಸ್ವಾಮಿ ಅವರ ನಂತರ ರೈತ ಹೋರಾಟದಲ್ಲಿ ಸಮರ್ಥ ನಾಯಕತ್ವ ರೂಢಿಸಿಕೊಂಡಿದ್ದರು.
ಸದನದ ಒಳಗೆ, ಹೊರಗೆ ರೈತರ ಸಮಸ್ಯೆಗಳನ್ನು ಬಲವಾಗಿ ಪ್ರತಿಪಾದಿಸುತ್ತಿದ್ದರು. ರೈತರ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಅವರ ಅಪಾರ ಕಾಳಜಿ ಇತ್ತು. ರೈತರ ವಿಷಯಗಳು ಬಂದಾಗ ರಾಜಿ ಆಗುತ್ತಿರಲಿಲ್ಲ. ಕಾವೇರಿ ವಿವಾದ ಸರ್ಕಾರ ಅಥವಾ ರಾಜಕಾರಣದಿಂದ ಬಗೆಹರಿಯಲು ಸಾಧ್ಯವಿಲ್ಲ. ರೈತರಿಂದ ಮಾತ್ರ ಪರಿಹಾರ ಸಾಧ್ಯ ಎಂದು ಪ್ರತಿಪಾದಿಸುತ್ತಿದ್ದರು. ಅದರಂತೆ ತಮಿಳುನಾಡಿನ ರೈತರನ್ನು ಹಲವಾರು ಬಾರಿ ಕರೆಸಿಕೊಂಡು ಸರ್ಕಾರದ ಜತೆ ಮಾತುಕತೆ ನಡೆಸಿದ್ದರು.
ರೈತರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರಕ್ಕೆ ಸಲಹೆ ರೂಪದಲ್ಲಿ ಮಾರ್ಗದರ್ಶನ ನೀಡುತ್ತಿದ್ದರು. ಮೇಕೆದಾಟಿನಿಂದ ವೃಥಾ ಸಮುದ್ರಕ್ಕೆ ಹರಿದು ಹೋಗುವ ನೀರಿಗೆ ಕಟ್ಟೆಹಾಕಿ ಕುಡಿಯಲು ಬಳಸಿಕೊಳ್ಳಬೇಕು ಎಂಬುದು ಅವರ ನಿಲುವಾಗಿತ್ತು.
ಕಾವೇರಿ ತೀರ್ಪು ಇತ್ತೀಚೆಗೆ ಪ್ರಕಟವಾಗಿದ್ದು, ಅದರಿಂದ ಅವರಿಗೆ ಸಾಮಾಧಾನವಾಗಿದೆ. ರಾಗ, ದ್ವೇಷ ಇಲ್ಲದ ಪುಟ್ಟಣ್ಣಯ್ಯ ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಲಿಲ್ಲ ಎಂದರು.
ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ರೈತರ ವಿಷಯದಲ್ಲಿ ಪುಟ್ಟಣ್ಣಯ್ಯ ಅವರದು ಗಟ್ಟಿ ನಿಲುವುವಾಗಿದ್ದು, ಬೆಂಬಲ ಬೆಲೆ ಸೇರಿದಂತೆ ಮತ್ತಿತರ ವಿಷಯಗಳಲ್ಲಿ ಕರಾರುವಕ್ಕಾಗಿ ಮಾತನಾಡುತ್ತಿದ್ದರು. ರಾಜ್ಯದ ಯಾವುದೇ ಭಾಗದಲ್ಲಾದರೂ ರೈತರಿಗೆ ಸಮಸ್ಯೆ ಉಂಟಾದರೆ ಅಲ್ಲಿಗೆ ಧಾವಿಸುತ್ತಿದ್ದರು. ಕಾವೇರಿ ನದಿ ಪಾತ್ರದ ಭಾಗಗಳಿಗೆ ನೀಡುತ್ತಿರುವ ಮಹತ್ವವನ್ನು ಎಲ್ಲಾ ರೈತರಿಗೂ ನೀಡುತ್ತಿದ್ದರು.
ಮಹದಾಯಿ ವಿಷಯದಲ್ಲಿ ಹುಬ್ಬಳ್ಳಿಗೆ ಹೋಗಿ ಹೋರಾಟ ಮಾಡಿದರೆ, ಕಬ್ಬಿನ ವಿಷಯದಲ್ಲಿ ಬೆಳಗಾವಿಗೆ ತೆರಳಿ ಪ್ರತಿಭಟೆಯಲ್ಲಿ ಭಾಗಿಯಾಗಿದ್ದರು. ನಂಜುಂಡಸ್ವಾಮಿ ಅವರ ಜತೆ ಪುಟ್ಟಣ್ಣಯ್ಯ ಹೋರಾಟ ಮಾಡುವಾಗ ರೈತ ಸಂಘ ಪ್ರಬಲವಾಗಿತ್ತು. ಅವರಿಬ್ಬರೂ ಒಂದು ಕರೆ ನೀಡಿದರೆ ರೈತರು ಬುತ್ತಿಕಟ್ಟಿಕೊಂಡು ಲಕ್ಷಾಂತರ ಸಂಖ್ಯೆಯಲ್ಲಿ ಬರುತ್ತಿದ್ದರು.
ಪುಟ್ಟಣ್ಣಯ್ಯ ಅವರ ನಿಧನದಿಂದ ರೈತಪರವಾದ ಕೊಂಡಿ ಕಳಚಿ ಬಿದ್ದಿದೆ. ದೀನದಲಿತರು, ಬಡವರ ಪರವಾಗಿ ಅವರಿಗಿದ್ದ ಕಾಳಜಿ ಅಪಾರ. ನಾನು ಮುಖ್ಯಮಂತ್ರಿಯಾಗಿದ್ದಾಗಲೂ ವಾರಕ್ಕೆ ಮೂರು ಬಾರಿ ಬಂದು ಭೇಟಿ ಮಾಡುತ್ತಿದ್ದರು. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದರು. ವೈಯಕ್ತಿಕವಾಗಿ ಯಾವ ಬೇಡಿಕೆಗಳನ್ನೂ ಮುಂದಿಡುತ್ತಿರಲಿಲ್ಲ. ಅವರ ಆದರ್ಶಗಳು ನಮಗೆ ಸ್ಪೂರ್ತಿ ಎಂದು ಹೇಳಿದರು.
ಕೃಷಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಪುಟ್ಟಣ್ಣಯ್ಯ ಅವರ ನಿಧನದಿಂದ ವೈಯಕ್ತಿಕವಾಗಿ ನನಗೆ ನಷ್ಟವಾಗಿದೆ. ನನ್ನನ್ನು ಅವರು ಟೀಕಿಸಿದ್ದರೂ ನನ್ನ ಪಾಲಿನ ಹಿತೈಷಿಯಾಗಿದ್ದರು. ಹಲವಾರು ಬಾರಿ ಮಾರ್ಗದರ್ಶನ ನೀಡಿದ್ದರು. ರೈತ ಚಳವಳಿಗೆ ಕರ್ನಾಟಕ ಮೂಲ. ನಂಜುಂಡಸ್ವಾಮಿ ಅವರ ಕಾಲದಿಂದಲೂ ದೇಶಕ್ಕೆ ರೈತ ಚಳವಳಿಯ ಮಾರ್ಗದರ್ಶನವನ್ನು ಕರ್ನಾಟಕ ನೀಡಿದೆ. ಸಾಮಾನ್ಯವಾಗಿ ಹೋರಾಟ ಎಂದರೆ ಸಮಸ್ಯೆಗಳನ್ನು ಉಲ್ಬಣ ಮಾಡುವುದರತ್ತ ಹೆಚ್ಚು ಗಮನಹರಿಸುತ್ತಾರೆ. ಆದರೆ ಪುಟ್ಟಣ್ಣಯ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೆಚ್ಚಿನ ಒತ್ತು ನೀಡುತ್ತಿದ್ದರು ಎಂದರು.
ಜೆಡಿಎಸ್‍ನ ವೈ.ಎಸ್.ವಿ.ದತ್ತ, ಸಚಿವ ಯು.ಟಿ.ಖಾದರ್, ಶಾಸಕರಾದ ಮೊಹಿದ್ದೀನ್ ಭಾವ, ಕೋನರೆಡ್ಡಿ, ನಾರಾಯಣಗೌಡ ಮತ್ತಿತರರು ಪುಟ್ಟಣ್ಣಯ್ಯ ಅವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿ ಅಂತಹ ಧೀಮಂತ ನಾಯಕ ಮತ್ತೆ ಹುಟ್ಟಿಬರಲಿ ಎಂದು ಆಶಿಸಿದರು.
ಕೊನೆಯಲ್ಲಿ ಒಂದು ನಿಮಿಷದ ಮೌನಾಚರಣೆ ಮೂಲಕ ಸದನದ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು.
ವಿಧಾನಪರಿಷತ್:
ರೈತ ಮುಖಂಡ, ವಿಧಾನಸಭಾ ಸದಸ್ಯ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಮೇಲ್ಮನೆಯಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಮೃತರ ಗೌರವಾರ್ಥ ಕಲಾಪವನ್ನು ಒಂದು ದಿನ ಮುಂದೂಡಲಾಯಿತು.
ಕಲಾಪ ಆರಂಭದಲ್ಲಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಸಂತಾಪ ಸೂಚಕ ನಿರ್ಣಯ ಮಂಡಿಸಿ ಪುಟ್ಟಣ್ಣಯ್ಯ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದರು.
ರೈತ ಮುಖಂಡರು, ಯಶಸ್ವಿ ಹೋರಾಟಗಾರರು, ಕೃಷಿ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ಪುಟ್ಟಣ್ಣಯ್ಯ ನೀಡಿದ್ದಾರೆ ಎಂದು ಬಣ್ಣಿಸಿದರು.
ವಿದ್ಯಾರ್ಥಿ ದಿಸೆಯಲ್ಲೇ ಕೃಷಿಕರು, ಕೂಲಿ ಕಾರ್ಮಿಕರ ಕಷ್ಟ-ಕಾರ್ಪಣ್ಯಗಳಿಗೆ ಮರುಗಿದ್ದರು. ಶೋಷಿತ ಮಹಿಳೆಯರ, ಬಡ ಜನಾಂಗದವರ ಏಳಿಗೆಗಾಗಿ ಶ್ರಮಿಸಬೇಕೆಂಬ ಮಹದಾಸೆ ಹೊಂದಿದ್ದರು. ಇವರು 1983ರಲ್ಲಿ ರಾಜ್ಯ ರೈತ ಸಂಘದ ಕಾರ್ಯಕರ್ತರಾಗಿ ಹೋರಾಟದ ಬದುಕು ಕಟ್ಟಿಕೊಂಡವರು. 1994ರ ವಿಧಾನಸಭೆ ಚುನಾವಣೆಯಲ್ಲಿ ರೈತ ಸಂಘದ ಅಭ್ಯರ್ಥಿಯಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.
2013ರ ಚುನಾವಣೆಯಲ್ಲಿ ಸರ್ವೋದಯ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಅವರ ನಿಧನದಿಂದ ಒಬ್ಬ ಧೀಮಂತ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಭಾನಾಯಕ ಎಂ.ಆರ್.ಸೀತಾರಾಂ ಮಾತನಾಡಿ, ಸರಳ-ಸಜ್ಜನ ರಾಜಕಾರಣಿ ಪುಟ್ಟಣ್ಣಯ್ಯ ಅವರ ಅಕಾಲಿಕ ನಿಧನ ಆಘಾತ ತಂದಿದೆ. ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದರು.
ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ಹೋರಾಟಗಾರ, ನೈತಿಕ ವಿಚಾರಗಳನ್ನು ಮಾರಾಟ ಮಾಡದ ಛಲಗಾರ ಯಾವುದೇ ಜಾತಿಯ ಹಿಂದೆ ಹೋಗದೆ ತಮ್ಮನ್ನು ನಂಬಿದ ಕೃಷಿಕರಿಗೆ ನ್ಯಾಯ ಒದಗಿಸಲು ಕೊನೆ ಕ್ಷಣದವರೆಗೂ ಹೋರಾಟ ಮಾಡಿದ ಪುಟ್ಟಣ್ಣಯ್ಯ ಅವರ ಅಕಾಲಿಕ ಮರಣ ಅತ್ಯಂತ ನೋವು ತಂದಿದೆ. ಅವರ ಹೋರಾಟದ ಮಾರ್ಗದರ್ಶನದಲ್ಲಿ ನಾವೆಲ್ಲ ಸಾಗೋಣ ಎಂದು ಹೇಳಿದರು.
ಒಂದು ನಿಮಿಷ ಮೌನ ಆಚರಿಸಿ ಮೃತರ ಗೌರವಾರ್ಥ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ