ಯೋಗಿ ಸರ್ಕಾರದ ದಿಟ್ಟ ಕ್ರಮ: 2,956 ರೌಡಿಗಳು ಕಂಬಿ ಹಿಂದೆ

ಮೀರತ್:ಫೆ-18: ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ರೌಡಿ ಶೀಟರ್‌ಗಳು ಶರಣಾಗಲು ಒಪ್ಪದಿದ್ದರೆ ಎನ್‌ಕೌಂಟರ್ ಮಾಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶ ಹಿನ್ನೆಲೆಯಲ್ಲಿ ಅಲ್ಲಿನ ರೌಡಿಗಳು ಚಕಾರವೆತ್ತದೇ ಜೈಲುಪಾಲಾಗುತ್ತಿದ್ದಾರೆ.

 

ಯೋಗಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಉತ್ತರ ಪ್ರದೇಶದಲ್ಲಿ 1240 ಎನ್‌ಕೌಂಟರ್‌ಗಳು ನಡೆದಿವೆ. ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ 40 ಕ್ರಿಮಿನಲ್‌ಗಳು ಅಸುನೀಗಿದ್ದು, 305ಕ್ಕೂ ಅಧಿಕ ರೌಡಿಗಳು ಗಾಯಗೊಂಡಿದ್ದಾರೆ.

 

ಮಾರ್ಚ್‌ 20, 2017ರಂದು ಪ್ರಾರಂಭವಾದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಫೆ.14ರವರೆಗೆ 2,956 ರೌಡಿಗಳು ಕಂಬಿ ಎಣಿಸುವಂತಾಗಿದೆ. ಈ ದಾಳಿಗಳಲ್ಲಿ 147 ಕೋಟಿ ರೂಪಾಯಿ ಮೌಲ್ಯದ 169 ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

 

ಉತ್ತರ ಪ್ರದೇಶದ ಡಿಜಿಪಿ ಕಚೇರಿಯ ಮಾಹಿತಿ ಪ್ರಕಾರ, ಪೊಲೀಸರ ಹಿಟ್‌ಲಿಸ್ಟ್‌ನಲ್ಲಿದ್ದ 142 ಕ್ರಿಮಿನಲ್‌ಗಳು ರಾಜ್ಯ ಹಾಗೂ ರಾಜ್ಯದ ಹೊರಭಾಗದಲ್ಲಿ ಶರಣಾಗಿದ್ದಾರೆ. ಈ ಖದೀಮರ ತಲೆಗೆ ಭಾರೀ ಪ್ರಮಾಣದ ಬಹುಮಾನವನ್ನು ಸಹ ಘೋಷಿಸಲಾಗಿತ್ತು. ಜಾಮೀನು ಮಂಜೂರಾಗಿರುವ 26 ಕ್ರಿಮಿನಲ್‌ಗಳು ಜೈಲು ತೊರೆಯಲು ಹಿಂದೇಟು ಹಾಕುತ್ತಿದ್ದು, 71 ರೌಡಿ ಶೀಟರ್‌ಗಳು ಜಾಮೀನು ತಿರಸ್ಕರಿಸಿ ಜೈಲಿಗೆ ಮರಳುತ್ತಿದ್ದಾರೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ