ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆರೋಪ: ಕಾಂಗ್ರೆಸ್ ಶಾಸಕ ಹ್ಯಾರಿಸ್‌ ಪುತ್ರನ ವಿರುದ್ಧ ದೂರು

 

ಬೆಂಗಳೂರು: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮತ್ತು ಆತನ ಸ್ನೇಹಿತರು ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಹ್ಯಾರಿಸ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ವಿದ್ವತ್‌ನ ಸ್ನೇಹಿತ ಪ್ರವೀಣ್ ಎಂಬಾತ ದೂರು ನೀಡಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆ ಶಾಸಕ ಎನ್.ಎ. ಹ್ಯಾರಿಸ್‌ ಅವರು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ವಿದ್ವತ್ ಆರೋಗ್ಯ ವಿಚಾರಿಸಿದ್ದಾರೆ ಎಂದು ತಿಳಿದುಬಂದಿದೆ.

ಹ್ಯಾರಿಸ್ಪುತ್ರ ಪರಾರಿ:

ಘಟನೆ ನಂತರ ಬಂಧನ ಭೀತಿಯಿಂದ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಹ್ಯಾರಿಸ್ ಪರಾರಿಯಾಗಿದ್ದಾನೆ. ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಲಪಾಡ್ ಹ್ಯಾರಿಸ್ ಮತ್ತು ಆತನ ಸ್ನೇಹಿತರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದರ ಜೊತೆಗೆ ರೆಸ್ಟೋರೆಂಟ್‌ನಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ನಡೆದಿದ್ದೇನು?: ಯುಬಿ ಸಿಟಿಯಲ್ಲಿರುವ ಫೆಗ್ರಿ ಕಫೆ ರೆಸ್ಟೋರೆಂಟ್‌ನಲ್ಲಿ ಶನಿವಾರ ರಾತ್ರಿ 11 ರ ವೇಳೆಗೆ ಈ ಘಟನೆ ನಡೆದಿದೆ. ಹ್ಯಾರಿಸ್ ಪುತ್ರ ನಲಪಾಡ್ ಹ್ಯಾರಿಸ್ ಮತ್ತು ಆತನ ಸ್ನೇಹಿತರು ವಿದ್ವತ್ ಎಂಬ ಯುವಕನಿಗೆ ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ.

ಗಾಯಗೊಂಡಿರುವ ವಿದ್ವತ್ ಈಗ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೆಸ್ಟೋರೆಂಟ್‌ನಲ್ಲಿ ಊಟ ಮಾಡುವ ವಿಷಯಕ್ಕೆ ಕಿರಿಕ್ ತೆಗೆದು ವಿದ್ವತ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಅಪಘಾತದಲ್ಲಿ ಮೊದಲೇ ಕಾಲು ಮುರಿದುಕೊಂಡಿದ್ದ ವಿದ್ವತ್ ಊಟಕ್ಕೆಂದು ಯುಬಿ ಸಿಟಿಗೆ ಬಂದಿದ್ದ ವೇಳೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆಗೊಳಗಾಗಿರುವ ವಿದ್ವತ್, ಡಾಲರ್ಸ್ ಕಾಲೋನಿಯ ನಿವಾಸಿಯಾದ ಉದ್ಯಮಿ ಲೋಕನಾಥ್ ಎಂಬುವರ ಮಗ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ