ಬೆಂಗಳೂರು, ಫೆ.17- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಒಟ್ಟು 4,96,56,059 ಮತದಾರರು ಮದಾನದ ಹಕ್ಕು ಹೊಂದಿದ್ದು, ಹೊಸದಾಗಿ ಸೇರ್ಪಡೆಯಾಗಲು ಈ ತಿಂಗಳ 22ರವರೆಗೆ ರಾಜ್ಯ ಚುನಾವಣಾ ಆಯೋಗ ಅವಕಾಶ ನೀಡಿದೆ.
ಒಟ್ಟು ಮತದಾರರಲ್ಲಿ ಪುರುಷ ಮತದಾರರು 2,05,75,029, ಮಹಿಳೆಯರು 2,02,79,582 ಹಾಗೂ 3113 ಮಂದಿ ತೃತೀಯ ಲಿಂಗಿಗಳು ಮತದಾನದ ಹಕ್ಕು ಹೊಂದಿದ್ದಾರೆ. ಬೆಂಗಳೂರಿನಲ್ಲೇ 46,04,190 (ಪುರುಷರು), 41,92,706(ಮಹಿಳೆಯರು), 1439 (ತೃತೀಯ ಲಿಂಗಿಗಳು) ಮತದಾರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಒಟ್ಟಾರೆ ರಾಜ್ಯಾದ್ಯಂತ 2,51,79,219 ಪುರುಷ ಮತದಾರರು, 2,44,72,288 ಮಹಿಳೆಯರು, 4552 ತೃತೀಯ ಲಿಂಗಿಗಳು ಸೇರಿದಂತೆ 49656059 ಮತದಾದನ ಹಕ್ಕು ಹೊಂದಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದರಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರವು 1,62,108 ಅತಿ ಕಡಿಮೆ ಮತದಾರರನ್ನು ಹೊಂದಿರುವ ವಿಧಾನಸಭಾ ಕ್ಷೇತ್ರವಾದರೆ, ಬೆಂಗಳೂರು ದಕ್ಷಿಣ 5,01,408 ಅತಿ ಹೆಚ್ಚು ಮತದಾರರನ್ನು ಹೊಂದಿರುವ ದೊಡ್ಡ ಕ್ಷೇತ್ರವಾಗಿದೆ.
ಪ್ರತಿ ವಿಧಾನಸಭಾ ಕ್ಷೇತ್ರದ ಸರಾಸರಿ ಮತದಾರರು 2,21,000 ಮತದಾರರನ್ನು ಹೊಂದಿದೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಇದರ ಪ್ರಮಾಣ 1,86,000 ಮತದಾರರನ್ನು ಹೊಂದಿತ್ತು ಎಂದು ತಿಳಿಸಿದರು.
ಕಳೆದ ನವೆಂಬರ್ 30ರಿಂದ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಮೂಲಕ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಲು ಕಾಲಾವಕಾಶ ನೀಡಲಾಗಿತ್ತು. ಸಾರ್ವಜನಿಕರಿಂದ ಇನ್ನಷ್ಟು ಸಮಯಾವಕಾಶ ಬೇಕೆಂಬ ಮನವಿ ಬಂದ ಹಿನ್ನೆಲೆಯಲ್ಲಿ ಇದೇ ತಿಂಗಳ 22ರವರೆಗೆ ಅರ್ಜಿ ಸಲ್ಲಿಸಬಹುದು. ಮಾರ್ಚ್ 15ರೊಳಗೆ ನಾವು ಅರ್ಹ ಮತದಾರರಿಗೆ ಗುರುತಿನ ಚೀಟಿಯನ್ನು ವಿತರಣೆ ಮಾಡಲಿದ್ದೇವೆ ಎಂದು ವಿವರಿಸಿದರು.
ಹೊಸದಾಗಿ ಮತದಾರರ ಸೇರ್ಪಡೆ, ಹೆಸರು ತೆಗೆದು ಹಾಕುವುದು, ಕ್ಷೇತ್ರಗಳ ಬದಲಾವಣೆ ಸೇರಿದಂತೆ ಮತ್ತಿತರ ವಿಷಯಗಳಿಗೆ ಅರ್ಜಿಯನ್ನು ಕೊಡಬಹುದು. ಈವರೆಗೂ ಹೊಸದಾಗಿ ಪಟ್ಟಿಗೆ ಸೇರ್ಪಡಿಸಿಕೊಳ್ಳಲು 31,41,816 ಅರ್ಜಿಗಳು ಬಂದಿದ್ದವು. ಇದರಲ್ಲಿ 29,54,976 ಅರ್ಜಿಗಳನ್ನು ಅಂಗೀಕಾರ ಮಾಡಲಾಗಿದೆ. ಇದು ಹಿಂದಿನ ಚುನಾವಣೆಗೆ ಹೋಲಿಸಿದರೆ ಅರ್ಜಿಗಳು ಬಂದಿರುವುದು ದಾಖಲೆ ಎಂದು ಸಂಜೀವ್ಕುಮಾರ್ ಪ್ರಶಂಸಿಸಿದರು.
ಪ್ರತಿಯೊಂದು ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಸಂಬಂಧ ಆಯೋಗದಿಂದಲೇ ಓರ್ವ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಇದೇ ರೀತಿ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ವತಿಯಿಂದ ಓರ್ವ ಏಜೆಂಟರನ್ನು ನೇಮಕ ಮಾಡಬೇಕು. ಜತೆಗೆ ಸಂಘ, ಸಂಸ್ಥೆಗಳು ಸಹ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಹೊಸ ಸೇರ್ಪಡೆ:
ಮತದಾರರ ಪಟ್ಟಿಯಲ್ಲಿ 17,12,583 ಈ ಬಾರಿಯ ಯುವ ಮತದಾರರು ಸೇರ್ಪಡೆಯಾಗಿದ್ದಾರೆ. ಇದರಲ್ಲಿ ವಿಶೇಷವಾಗಿ 18ರಿಂದ 19 ವರ್ಷದ ಯುವ ಮತದಾರರ ಸಂಖ್ಯೆ 7,72,649. ಇದು ರಾಜ್ಯದ ಇತಿಹಾಸದಲ್ಲೇ ದಾಖಲೆಯ ಪ್ರಮಾಣ ಎಂದರು.
18ರಿಂದ 19ವರ್ಷದೊಳಗೆ ಒಟ್ಟು 15,42,121 ಮತದಾರರಿದ್ದಾರೆ. 1-1-2000ರಂದು ಜನಿಸಿದ ಮತದಾರರನ್ನು ಮಿಲೆನಿಯಂ ಮತದಾರರೆಂದು ಪರಿಗಣಿಸಲಾಗಿದ್ದು, ಇವರ ಸಂಖ್ಯೆ 2,743 ಎಂದು ಹೇಳಿದರು.
ಈ ಬಾರಿ ಮಹಿಳೆಯರ ಸರಾಸರಿ ಪ್ರಮಾಣ ಒಂದು ಸಾವಿರಕ್ಕೆ 971ರಷ್ಟು ಇದೆ. 2013ರಲ್ಲಿ ಇದರ ಪ್ರಮಾಣ 958 ಇತ್ತು. ಒಟ್ಟು 10,13,704 ಮತದಾರರನ್ನು ಬೇರೆ ಬೇರೆ ಕಾರಣಗಳಿಂದ ತೆಗೆದು ಹಾಕಲಾಗಿದೆ.
2013ರಲ್ಲಿ 16 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈ ಬಿಡಲಾಗಿತ್ತು. 3,67,474 ಮತದಾರರು ಮೃತಪಟ್ಟಿದ್ದಾರೆ. ಮತದಾನದ ಹಕ್ಕು ಹೊಂದಿರುವವರು ಈಗಲೂ ಅರ್ಜಿ ಸಲ್ಲಿಸಬಹುದು. ಚುನಾವಣಾ ದಿನಾಂಕ ಸಮೀಪಿಸುತ್ತಿದ್ದಂತೆ ಎಲ್ಲರಿಗೂ ಗುರುತಿನ ಚೀಟಿಗಳನ್ನು ನೀಡಿದ್ದೇವೆ. ಇದರಲ್ಲಿ ಯಾರಿಗೂ ಯಾವ ರೀತಿಯ ಗೊಂದಲ ಬೇಡ ಎಂದು ಅವರು ಮನವಿ ಮಾಡಿಕೊಂಡರು.