ಬೆಂಗಳೂರು, ಫೆ.17-ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಣತಂತ್ರ ರೂಪಿಸಲು ಮುಂದಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಚುನಾವಣಾ ಚಾಣಾಕ್ಯ ಅಮಿತ್ ಷಾ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಈ ಹಿಂದೆ ಬಿಜೆಪಿ ಅವಧಿಯಲ್ಲಿ ಪ್ರಭಾವಿ ಖಾತೆಯನ್ನು ಹೊಂದಿದ್ದ ಹಾಗೂ ಚಾಲುಕ್ಯವೃತ್ತದಲ್ಲಿರುವ ಮಾಜಿ ಸಚಿವರ ನಿವಾಸದಲ್ಲಿ ಸೋಮವಾರದಿಂದ ಅಮಿತ್ ಷಾ ಮತ್ತು ಅವರ ಚುನಾವಣಾ ತಂಡ ಬೀಡುಬಿಡಲಿದೆ.
ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಈ ತಂಡ ಇಲ್ಲಿಯೇ ವಾಸ್ತವ್ಯ ಹೂಡಲಿದ್ದು , ಪಕ್ಷದ ಗೆಲುವಿಗೆ ರಣತಂತ್ರವನ್ನು ರೂಪಿಸಲಿದೆ.
ಲೋಕಸಭೆ ಚುನಾವಣೆಯಿಂದ ಹಿಡಿದು ಸದ್ಯಕ್ಕೆ ನಡೆಯುತ್ತಿರುವ ಈಶಾನ್ಯ ರಾಜ್ಯಗಳಾದ ತ್ರಿಪುರ, ಮೇಘಾಲಯ ಸೇರಿದಂತೆ ಹಿಂದೆ ನಡೆದ ಎಲ್ಲ ರಾಜ್ಯಗಳ ವಿಧಾನಸಭೆ ಚುನಾವಣೆಗೂ ಇದೇ ತಂಡ ಕೆಲಸ ಮಾಡಿತ್ತು.
ಅಮಿತ್ ಷಾ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ತಂಡದಲ್ಲಿ ನುರಿತ ಐಟಿ ತಜ್ಞರು, ಸಾಮಾಜಿಕ ಜಾಲತಾಣ ನಿರ್ವಹಣೆ, ಆರ್.ಎಸ್.ಎಸ್ ಮುಖಂಡರು ಹಾಗೂ ಪಕ್ಷದ ಕೆಲವೇ ಕೆಲವು ಆಪ್ತರು ಮಾತ್ರ ಕೆಲಸ ಮಾಡಲಿದ್ದಾರೆ.
ಪ್ರಧಾನಮಂತ್ರಿ ಚುನಾವಣಾ ಸಂದರ್ಭದಲ್ಲಿ ರಾಜ್ಯಕ್ಕೆ ಬಂದ ಮೇಲೆ ಯಾವ ಯಾವ ಪ್ರದೇಶಗಳಲ್ಲಿ ಯಾವ ವಿಷಯವನ್ನು ಪ್ರಸ್ತಾಪಿಸಬೇಕು, ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿತಂತ್ರ ರೂಪಿಸುವುದು, ಅಭ್ಯರ್ಥಿಗಳ ಆಯ್ಕೆ, ಚುನಾವಣಾ ರಣತಂತ್ರ ರೂಪಿಸುವುದು, ಪ್ರಣಾಳಿಕೆ ಸಿದ್ದಪಡಿಸುವುದು, ಪ್ರಚಾರದ ಕಾರ್ಯ ಶೈಲಿ ಎಲ್ಲವನ್ನು ಈ ತಂಡ ನಿರ್ವಹಣೆ ಮಾಡಲಿದೆ.
ಚಾಲುಕ್ಯ ವೃತ್ತದಲ್ಲೇ ವಾಸ್ತವ್ಯ:
ಈ ಹಿಂದೆ ಅಮಿತ್ ಷಾ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಚಾಲುಕ್ಯ ವೃತ್ತದಲ್ಲಿರುವ ಮಾಜಿ ಸಚಿವರ ಮನೆ ವಾಸ್ತು ಸರಿ ಹೊಂದಿರುವುದು ಹಾಗೂ ಜ್ಯೋತಿಷಿಗಳ ಸಲಹೆಯಂತೆ ಇದನ್ನು ಆಯ್ಕೆ ಮಾಡಲಾಗಿದೆ.
ಸರಿಸುಮಾರು ಎರಡೂವರೆಯಿಂದ ಮೂರು ತಿಂಗಳ ಕಾಲ ಈ ತಂಡ ಇಲ್ಲಿಯೇ ವಾಸ್ತವ್ಯ ಹೂಡಿ ಪಕ್ಷದ ಗೆಲುವಿಗೆ ಹಗಲುರಾತ್ರಿ ಶ್ರಮಿಸಲಿದೆ.
ಈಗಾಗಲೇ ಮನೆಯನ್ನು ತಮಗೆ ಬೇಕಾದಂತ ರೀತಿಯಲ್ಲಿ ಸಿದ್ದಪಡಿಸಲಾಗಿದ್ದು , ಎಲ್ಲ ರೀತಿಯ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಕಂಪ್ಯೂಟರ್ ಅಳವಡಿಕೆಗಾಗಿ ಪ್ರತ್ಯೇಕ ಕೊಠಡಿಗಳು, ಸಾಮಾಜಿಕ ಜಾಲತಾಣ ನಿರ್ವಹಣೆಗಾಗಿ ಪ್ರತ್ಯೇಕ ತಂಡ ಸೇರಿದಂತೆ ಹೀಗೆ ಹಲವು ತಂಡಗಳು ಕಾಳಜಿ ವಹಿಸಲಿವೆ.
ನಗರದ ಹೊರವಲಯದಲ್ಲಿ ಮನೆ ಮಾಡಿದರೆ ಹೋಗಿಬರಲು ದೂರವಾಗತ್ತದೆ ಎಂಬ ಕಾರಣಕ್ಕಾಗಿಯೇ ನಗರದಲ್ಲಿ ಮನೆ ಮಾಡಲಾಗಿದೆ. ಸಣ್ಣಪುಟ್ಟ ಕೆಲಸಗಳಿಗೂ ಅಮಿತ್ ಷಾ ಅವರನ್ನು ಭೇಟಿ ಮಾಡಬೇಕಾದರೆ ಅಲ್ಲಿಗೆ ತೆರಳಬೇಕಾಗುತ್ತದೆ. ಹಾಗಾಗಿಯೇ ಚಾಲುಕ್ಯ ವೃತ್ತದ ಬಳಿಯಿರುವ ಮಾಜಿ ಸಚಿವರ ಮನೆಯನ್ನು ಆಯ್ಕೆ ಮಾಡಲಾಗಿದೆ.