ವಿಜಯಪುರ,ಫೆ.15-ದಲಿತರ ಬಗ್ಗೆ ಹೇಳಿಕೆ ನೀಡಿದ್ದ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಅವರು, ಕಾಂಗ್ರೆಸ್ನಲ್ಲಿರುವ ದಲಿತರು ಪಾಪಿಗಳೇ ಹೊರತು ಬಿಜೆಪಿಯಲ್ಲಿ ಇರುವವರಲ್ಲ ಎಂದಿದ್ದಾರೆ.
ನಗರದಲ್ಲಿ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲದವರು ಇಂದು ಬಾಬಾ ಸಾಹೇಬ್ ಅವರ ಬಗ್ಗೆ ಮಾತನಾಡುತ್ತಿರುವುದು ಅವರ ರಾಜಕೀಯ ದಿವಾಳಿತನವನ್ನು ತೋರುತ್ತದೆ ಎಂದು ಖರ್ಗೆ ವಿರುದ್ದ ವಾಗ್ದಾಳಿ ನಡೆಸಿದರು.
ಬಿಜೆಪಿಯಲ್ಲಿರುವ ಯಾವುದೇ ದಲಿತರು ಪಾಪಿಗಳಲ್ಲ. ನಮ್ಮ ಸ್ಥಾನಮಾನಕ್ಕೆ ತಕ್ಕಂತೆ ಪಕ್ಷವು ನಮಗೆ ಸೂಕ್ತ ಗೌರವ ನೀಡಿದೆ. ಪಾಪಿಗಳಿದ್ದರೆ ಕಾಂಗ್ರೆಸ್ನಲ್ಲೇ ಹೊರತು ನಮ್ಮಲ್ಲಿ ಅಂಥವರ್ಯಾರು ಇಲ್ಲ ಎಂದು ಹೇಳಿದರು.
ಲೋಕಸಭೆ ಚುನಾವಣೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಸ್ಪರ್ಧಿಸಿದ್ದ ವೇಳೆ ಅವರ ವಿರುದ್ದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪರಾಭವಗೊಳ್ಳುವಂತೆ ಮಾಡಿತ್ತು.
ಅಂಬೇಡ್ಕರ್ ಅವರು ಸಂಸತ್ ಪ್ರವೇಶಿಸಿದರೆ ಎಲ್ಲಿ ಪ್ರಧಾನಿಯಾಗುತ್ತಾರೋ ಎಂಬ ಕಾರಣಕ್ಕಾಗಿ ಅವರನ್ನು ಸೋಲಿಸಿದ ಕಾಂಗ್ರೆಸ್ ಪಕ್ಷ ಇಂದು ದಲಿತರ ಬಗ್ಗೆ, ಅವರ ಕಲ್ಯಾಣದ ಬಗ್ಗೆ ಮಾತನಾಡುತ್ತಿರುವುದು ನಾಚಿಗೇಡಿನ ಸಂಗತಿ. ಅಂಬೇಡ್ಕರ್ ಹೆಸರು ಹೇಳಲು ಅರ್ಹತೆ ಇಲ್ಲದವರು ದೇಶ ತುಂಬ ಅವರ ಹೆಸರನ್ನು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಬಿಜೆಪಿ ಎಂದಿಗೂ ದಲಿತರ ವಿರೋಧಿಯಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೇಲೆ ಅಪಾರವಾದ ಗೌರವ ಇದ್ದುದ್ದರಿಂದಲೇ ನಾವು ಅವರು ಹುಟ್ಟಿದ ಸ್ಥಳ, ಓದಿದ ಕಾಲೇಜು, ಪರಿನಿರ್ವಾಣ ಹೊಂದಿದ ಸ್ಥಳವನ್ನು ಅಂತಾರಾಷ್ಟ್ರೀಯ ಕೇಂದ್ರವನ್ನಾಗಿ ಪರಿವರ್ತಿಸಲು ಮುಂದಾಗಿದ್ದೇವೆ. ಅವರು ಸತ್ತಾಗ ದೆಹಲಿಯಲ್ಲಿ ಆರಡಿ, ಮೂರಡಿ ಜಾಗ ಕೊಡದವರು ಅವರ ಬಗ್ಗೆ ಮಾತನಾಡುವ ನೈತಿಕತೆಯನ್ನು ಇಟ್ಟುಕೊಂಡಿದ್ದಾರೆಯೇ ಎಂದು ಜಿಣಜಿಣಗಿ ಪ್ರಶ್ನಿಸಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಎಲ್ಲಾ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಅದನ್ನು ಸಹಿಸದ ಪ್ರತಿಪಕ್ಷಗಳು ಅಪಪ್ರಚಾರ ನಡೆಸುತ್ತಿದ್ದಾರೆ. ಇದಕ್ಕೆ ದೇಶದ ಜನತೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.