ನೀರವ್ ಮೋದಿ ವಿದೇಶಕ್ಕೆ ಪರಾರಿ ವರದಿ: ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷ ವಾಗ್ದಾಳಿ

ನವದೆಹಲಿ:ಫೆ-15: ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ 11,400ಕೋಟಿ ರೂ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಉದ್ಯಮಿ ನೀರವ್ ಮೋದಿ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂಬ ವರದಿ ಹಿನ್ನಲೆಯಲ್ಲಿ ವಿಪಕ್ಷಗಳು ಕೆಂದ್ರ ಎನ್ ಡಿಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪ್ರಕರಣ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲಾ, ಇದೊಂದು ಹೊಸ ಮೋದಿ ಹಗರಣವೇ ಎಂದು ಪ್ರಶ್ನಿಸಿದ್ದಾರೆ. ನೀರವ್ ಮೋದಿ ಯಾರು? ಇದು ಹೊಸ ಮೋದಿ ಸ್ಕ್ಯಾಮ್ ಆಗಿದೆಯೇ? ಲಲಿತ್ ಮೋದಿ ಹಾಗೂ ವಿಜಯ್ ಮಲ್ಯರಂತೆ ಸರ್ಕಾರದಲ್ಲಿದ್ದವರ ನೆರವಿನಿಂದಲೇ ನೀರವ್ ಕೂಡ ಭಾರತ ಬಿಟ್ಟು ಪರಾರಿಯಾಗಿದ್ದಾರೆಯೇ? ಸಾರ್ವಜನಿಕ ಹಣದೊಂದಿದೆ ಪರಾರಿಯಾಗುವುದು ಸಾಮಾನ್ಯವಾಗಿಬಿಟ್ಟಿದೆ. ಇದಕ್ಕೆ ಜವಾಬ್ದಾರರು ಯಾರು ಎಂದು ಸುರ್ಜೇವಾಲಾ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಇನ್ನು ದೆಹಲಿ ಮುಖ್ಯಮಂತ್ರಿ, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕೂಡ ವಾಗ್ದಾಳಿ ನಡೆಸಿದ್ದು, ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ ವಂಚಿಸಿ ಈಗ ಜಾರಿ ನಿರ್ದೇಶನಾಲಯದ ವಿಚಕ್ಷಣೆಯಲ್ಲಿರುವ ನೀರವ್‌ ಮೋದಿ, ಬಿಜೆಪಿಯ ಕೃಪೆ ಇಲ್ಲದೆ, ವಿಜಯ್‌ ಮಲ್ಯ ಅವರಂತೆ ಸುರಕ್ಷಿತವಾಗಿ ವಿದೇಶಕ್ಕೆ ಪರಾರಿಯಾಗಲು ಸಾಧ್ಯವೇ ? ಎಂದು ಟ್ವೀಟ್ ಮಾಡಿದ್ದಾರೆ.

ಜಾರಿ ನಿರ್ದೇಶನಾಲಯ ಇಂದು ನೀರವ್‌ ಮೋದಿ ಅವರ ಮುಂಬಯಿ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ ಹಿನ್ನೆಲಯಲ್ಲಿ ಕೇಜ್ರಿವಾಲ್‌ ಟ್ವಿಟರ್‌ನಲ್ಲಿ “ಬಿಜೆಪಿ ಕೃಪೆ’ ಯನ್ನು ಕೊಂಡಾಡಿದ್ದಾರೆ.

ಸಿಪಿಐ(ಎಂ) ಮುಖಂಡ ಸೀತಾರಾಮ್ ಯೆಚೂರಿ ಟ್ವಿಟರ್ ನಲ್ಲಿ ಆತಂಕ ವ್ಯಕ್ತಪಡಿಸಿದ್ದು, ಜ.31ರಂದು ಎಫ್ ಐ ಆರ್ ದಾಖಲಾಗುವ ಮೊದಲೇ ಈ ವ್ಯಕ್ತಿ ದೇಶಬಿಟ್ಟು ಪರಾರಿಯಾಗಿದ್ದರೆ, ಎಫ್ ಐಆರ್ ದಾಖಲಾಗುವ ಒಂದು ವಾರ ಮೊದಲು ಡಾವೋಸ್ ನಲ್ಲಿ ಪ್ರಧಾನಿಯೊಂದಿಗೆ ನೀರವ್ ಫೋಟೋ ತೆಗೆದುಕೊಂಡಿದ್ದರು. ಹಾಗಾದರೆ ಭಾರತದಿಂದ ಪರಾರಿಯಾದ ಬಳಿಕ ಹೀಗೆ ಮಾಡಿದ್ದಾರೆಯೇ ಎಂದು ಮೋದಿ ಸರ್ಕಾರ ಸ್ಪಷ್ಟಪಡಿಸಬೇಕು ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ