ಬೆಂಗಳೂರು, ಫೆ.15-ಕರ್ನಾಟಕ ಆರ್ಯ ವೈಶ್ಯ ಸಮಾಜದ ಮೀಸಲಾತಿ, ಅಭಿವೃದ್ಧಿ ಮಂಡಳಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಸರ್ಕಾರದ ಗಮನ ಸೆಳೆಯಲು ಇದೇ 18 ರಂದು ರಾಜ್ಯಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಆರ್ಯವೈಶ್ಯ ಮಹಾಮಂಡಳಿ ಅಧ್ಯಕ್ಷರಾದ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಇದೇ ಮೊದಲ ಬಾರಿಗೆ ಆರ್ಯವೈಶ್ಯ ಸಮುದಾಯದ ಬೃಹತ್ ಸಮಾವೇಶ ಆಯೋಜಿಸಲಾಗುತ್ತಿದೆ.
ಅಲ್ಪಸಂಖ್ಯಾತರೆಂದು ಆರ್ಯವೈಶ್ಯರನ್ನು ಪರಿಗಣಿಸಲಾಗಿದೆ. ಆದರೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಸೇರಿದಂತೆ ಸಮಾಜದ ಸರ್ವತೋಮುಖ ಅಭಿವೃದ್ಧಿ ಅಗತ್ಯವಾಗಿರುವ ಮಂಡಳಿ ಸ್ಥಾಪನೆ ಬಗ್ಗೆ ಸರ್ಕಾರದ ಗಮ ಸೆಳೆಯುವ ಉದ್ದೇಶದಿಂದ ಸಮಾವೇಶ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ನಗರದ ಸಜ್ಜನ್ ವೃತ್ತದಲ್ಲಿರುವ ವಾಸವಿ ದೇವಾಲಯದ ಬಳಿಯಿಂದ ಬೆಳ್ಳಿರಥ ಹಾಗೂ ಪೂರ್ಣಕುಂಭ ಮೆರವಣಿಗೆ ಹೊರಟು ತ್ರಿಪುರವಾಸಿನಿಯಲ್ಲಿ ಸಮಾವೇಶಗೊಳ್ಳಲಿದೆ.
ಮೆರವಣಿಗೆಗೆ ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ ಚಾಲನೆ ನೀಡಲಿದ್ದು, ಅರಮನೆ ಮೈದಾನದಲ್ಲಿ ನಡೆಯಲಿರುವ ಜಾಗೃತಿ ಸಮಾವೇಶವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಹಂಪಿಯಿಂದ ಪಾದಯಾತ್ರೆಯಲ್ಲಿ ಆಗಮಿಸುತ್ತಿರುವ 2 ಸಾವಿರ ಮಂದಿ ಯುವಕರು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದು, ಸಮಾವೇಶದಲ್ಲಿ ಸಮುದಾಯದ ವಿಕಲಚೇತನರಿಗೆ ಕರುಣಾಮಯಿ ಮಾಸಾಶನ ಆರಂಭಿಸಲಾಗುತ್ತಿದೆ. ಇದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಆರ್ಯವೈಶ್ಯ ಮಾಸಪತ್ರಿಕೆಯನ್ನು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಬಿಡುಗಡೆ ಮಾಡಲಿದ್ದಾರೆ.
ಇದೇ ವೇಳೆ ರಾಜ್ಯ ಆರ್ಯವೈಶ್ಯ ಮಹಿಳಾ ಘಟಕದ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಲಿದ್ದು, ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ನೆರವೇರಲಿದೆ. ಇದರಲ್ಲಿ ನಟಿ ಮಯೂರಿ, ಜವಳಿ ಆಯುಕ್ತ ಗಿರೀಶ್, ಯುವಜನ ಮಹಾಸಭಾ ಕೋಟೇಶ್ವರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಆರ್ಯವೈಶ್ಯ ಸಮುದಾಯದ ವಿವಿಧ ಸಂಘಟನೆಗಳು ಒಗ್ಗೂಡಿ ಇದೇ ಮೊದಲ ಬಾರಿಗೆ ನಡೆಸುತ್ತಿರುವ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಸುದ್ದಿಗೋಷ್ಠಿಯಲ್ಲಿ ಪ್ರಧಾನಕಾರ್ಯದರ್ಶಿ ಗಿರೀಶ್ ಪೆಂಡಕೂರು, ಕೆ.ವಿಜಯ್ರಾಜೇಶ್, ಹಿರಿಯ ಉಪಾಧ್ಯಕ್ಷ ಗೋವಿಂದ್ ಮತ್ತಿತರರು ಉಪಸ್ಥಿತರಿದ್ದರು.