ಗಡಿಯಲ್ಲಿ ಅಕ್ರಮವಾಗಿ ಒಳನುಸುಉತ್ತಿದ್ದ ಉಗ್ರರನ್ನು ಹಿಮ್ಮೆಟ್ಟಿಸಿದ ಭಾರತೀಯ ಸೇನೆ

ಶ್ರೀನಗರ:ಫೆ-15: ಸುಂಜುವಾನ್ ಹಾಗೂ ಕರಣ್ ನಗರ ಸೇನಾ ಕ್ಯಾಂಪ್ ಮೇಲೆ ಉಗ್ರರು ನಡೆಸಿದ ದಾಳಿ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಇಂಡೋ-ಪಾಕ್ ಗಡಿಯಲ್ಲಿ ಭಾರತದ ಗಡಿಯೊಳಗೆ ಅಕ್ರಮವಾಗಿ ಒಳ ನುಸುಳುತ್ತಿದ್ದ ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.

ಇಂದು ಬೆಳಗ್ಗೆ ಕಾಶ್ಮೀರದ ಪೂಂಛ್ ನ ಮೆಂಧಾರ್ ಸೆಕ್ಟರ್ ನಲ್ಲಿ ಭಾರತೀಯ ಸೇನೆಯ ಕಣ್ತಪ್ಪಿಸಿ ಗಡಿಯೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನಿ ಉಗ್ರರನ್ನು ಭಾರತೀಯ ಸೇನೆಯ ಸೈನಿಕರು ಹಿಮ್ಮೆಟ್ಟಿಸಿದ್ದಾರೆ. ಶಂಕಿತ ವ್ಯಕ್ತಿಗಳು ಗಡಿಯೊಳಗೆ ನುಸುಳುತ್ತಿದ್ದಂತೆಯೇ ಅವರತ್ತ ಸೇನೆ ಗುಂಡು ಹಾರಿಸಿದ್ದು, ಈ ವೇಳೆ ಉಗ್ರರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಪರಾರಿಯಾಗಿರುವ ಉಗ್ರರಿಗಾಗಿ ಸಿಆರ್ ಪಿಎಫ್ ಯೋಧರು ತೀವ್ರ ಶೋಧ ನಡೆಸುತ್ತಿದ್ದು, ಅಂತೆಯೇ ಇದಕ್ಕೂ ಮೊದಲು ಉಗ್ರರು ಭಾರತದೊಳಗೆ ನುಸುಳಿರುವ ಶಂಕೆ ಮೇರೆಗೆ ಶೋಧ ತೀವ್ರ ಗೊಳಿಸಲಾಗಿದೆ.

ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ 2 ಪ್ರತ್ಯೇಕ ಉಗ್ರ ದಾಳಿಗಳಲ್ಲಿ ಸೈನಿಕರು, ಸಾರ್ವಜನಿಕರು ಹಾಗೂ ಉಗ್ರರು ಸೇರಿದಂತೆ ಒಟ್ಟು 12 ಮಂದಿ ಸಾವಿಗೀಡಾಗಿದ್ದರು. ಸುಂಜುವಾನ್ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಸೈನಿಕರು ಸೇರಿದಂತೆ ಒಟ್ಟು 7 ಮಂದಿ ಸಾವಿಗೀಡಾಗಿದ್ದರೆ, ಇಲ್ಲಿ ಮೂವರು ಉಗ್ರರನ್ನು ಕೊಂದು ಹಾಕಲಾಗಿತ್ತು. ಅಂತೆಯೇ ಕರಣ್ ನಗರದಲ್ಲಿ ನಡೆದ ಉಗ್ರ ದಾಳಿಯಲ್ಲಿ ಇಬ್ಬರು ಉಗ್ರರನ್ನು ಸದೆಬಡಿಯಲಾಗಿತ್ತು. ಈ ಎರಡು ದಾಳಿಗಳ ಬಳಿಕ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ