ಕಲ್ಬುರ್ಗಿ,ಫೆ.14-ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರಚಾರದಿಂದ ಪಕ್ಷದ ಕಾರ್ಯಕರ್ತರಲ್ಲಿ ಹುರುಪು ಬಂದಿದೆ. ರಾಹುಲ್ ಗಾಂಧಿ ಅವರಿಗೆ ತಮ್ಮದೇ ಆದ ವರ್ಚಸ್ಸಿದೆ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ವಿನಾಕಾರಣ ನನ್ನ ವಿರುದ್ಧ ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ಆರೋಪ ಮಾಡುತ್ತಾ ರಾಹುಲ್ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನ ವರ್ಚಸ್ಸು ತೆರೆದ ಪುಸ್ತಕದಂತಿದೆ. ಆಸ್ತಿ ಗಳಿಕೆ ಪ್ರಕರಣ ಆರು ವರ್ಷದ ಹಿಂದೆಯೇ ಮುಗಿದಿದೆ. ವಿನಾಕಾರಣ ಬಿಜೆಪಿಯವರು ಚುನಾವಣೆ ಸಮಯದಲ್ಲಿ ಈ ವಿಷಯವನ್ನು ಕೆದುಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಪ್ರಾಮಾಣಿಕವಾಗಿ ಖರ್ಗೆ ಸಾಹೇಬರು ಇರುವುದರಿಂದಲೇ ರಾಜಕೀಯದಲ್ಲಿ ಅವರು ಸೋಲಿಲ್ಲದ ಸರದಾರರೆನಿಸಿಕೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ಬಿಜೆಪಿಯವರು ವಿನಾಕಾರಣ ಚಾರಿತ್ರಿಕ ವಧೆ, ತೇಜೋವಧೆಯಲ್ಲಿ ತೊಡಗಿದ್ದಾರೆ. ದೇಶದಲ್ಲಿ ಕೋಮುವಾದಿ ವಿಷಬೀಜ ಬಿತ್ತುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರಿಗೆ ಯಾವುದೇ ವಿಷಯ ಸಿಗುತ್ತಿಲ್ಲ. ಆದ್ದರಿಂದ ವಿನಾಕಾರಣ ಆರು ವರ್ಷದ ಹಿಂದಿನ ಪ್ರಕರಣವನ್ನು ಈಗ ಎಳೆದು ತರುತ್ತಿದ್ದಾರೆ. ಈ ಪ್ರಕರಣವನ್ನು ಲೋಕಾಯುಕ್ತವೇ ಹೊರಗೆ ಹಾಕಿದೆ ಎಂದರು.
ಐವತ್ತು ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಬಿಜೆಪಿ ಆರೋಪಿಸಿದೆ. ಇದು ನಮ್ಮ ರಾಜ್ಯದ ಅರ್ಧ ಬಜೆಟ್ನಷ್ಟಿದೆ. ಚಿಕ್ಕಮಗಳೂರು ಕೂರ್ಗ್ನಲ್ಲಿ ನಮ್ಮ ಆಸ್ತಿ ಇದೆ ಎಂದು ಆರೋಪಿಸುತ್ತಿದ್ದಾರೆ. ಅಲ್ಲಿ ಬಿಜೆಪಿಯ ಸಿ.ಟಿ.ರವಿ, ಬೋಪಯ್ಯ ಇದ್ದಾರೆ. ಇವರು ನಮ್ಮ ಆಸ್ತಿ ಹುಡುಕಿಕೊಡಲಿ ಎಂದು ಸವಾಲು ಹಾಕಿದರು.
ನಮ್ಮದು ತೆರೆದ ಕನ್ನಡಿ. ಖರ್ಗೆ ಸಾಹೇಬರು ರಾಜಕೀಯಕ್ಕೆ ಬಂದು ಐವತ್ತು ವರ್ಷಗಳಾಗಿವೆ. ಅಕ್ರಮ ಆಸ್ತಿ ಇದ್ದರೆ ಬಿಜೆಪಿ ಸಾಬೀತುಪಡಿಸಲಿ. ಒಂದು ವೇಳೆ ಸಾಬೀತಾಗದಿದ್ದರೆ ಯಡಿಯೂರಪ್ಪ ಹಾಗೂ ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.