ನವದೆಹಲಿ, ಫೆ.13-ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ವಿರುದ್ಧ ಗೋವಾ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಇಂದು ಹಿಂದಕ್ಕೆ ಪಡೆದಿದೆ.
ವಿವಾದಿತ ಜಾಗದಲ್ಲಿ ನೀರಾವರಿ ಕಾಮಗಾರಿಗಳನ್ನು ಕರ್ನಾಟಕ ಸರ್ಕಾರ ಮಾಡುತ್ತಿದ್ದು, ನ್ಯಾಯಾಧೀಕರಣ ಆದೇಶವನ್ನು ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ ನ್ಯಾಯಾಧೀಕರಣ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ವಿವಾದಿತ ಜಾಗದಲ್ಲಿ ಯಾವುದೇ ಕಾಮಗಾರಿಗಳನ್ನು ನಡೆಸುತ್ತಿಲ್ಲ ಮತ್ತು ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿಲ್ಲ ಎಂದು ಕರ್ನಾಟಕ ಸರ್ಕಾರ ನ್ಯಾಯಾಧೀಕರಣದ ಮುಂದೆ ಪ್ರಮಾಣ ಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಇಂದು ವಿಚಾರಣೆ ಪ್ರಾರಂಭದಲ್ಲೇ ಗೋವಾ ಸರ್ಕಾರ ತನ್ನ ಅರ್ಜಿಯನ್ನು ಹಿಂದಕ್ಕೆ ಪಡೆದಿದೆ.
ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಕಣಕುಂಬಿಯಲ್ಲಿ ನದಿ ತಿರುವು ಕಾಮಗಾರಿಗಳನ್ನು ಕರ್ನಾಟಕ ಸರ್ಕಾರ ನಡೆಸುತ್ತಿದೆ ಎಂದು ಆರೋಪಿಸಿ ಗೋವಾ ಜಲಸಂಪನ್ಮೂಲ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಅಲ್ಲದೆ, ಗೋವಾ ಸ್ಪೀಕರ್ ನೇತೃತ್ವದ ನಿಯೋಗ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ನಂತರ ಗೋವಾ ನ್ಯಾಯಾಧೀಕರಣದ ಮುಂದೆ ಕರ್ನಾಟಕ ಸರ್ಕಾರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಈಗ ಅರ್ಜಿಯನ್ನು ವಾಪಸ್ ಪಡೆದಿದೆ.
(ಫೋಟೋವನ್ನು ಪ್ರಾತಿನಿಧ್ಯಕ್ಕಾಗಿ ಮಾತ್ರ ಇರಿಸಲಾಗಿರುತ್ತದೆ, ಮೂಲವಲ್ಲ)