ಬೆಂಗಳೂರು, ಫೆ.13- ಬಿಬಿಎಂಪಿ ಸದಸ್ಯೆ ರೇಖಾ ಅವರ ಪತಿ ಕದಿರೇಶನ್ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆ ವಿರೋಧಿಸಿ ಬಿಜೆಪಿ ಇಂದು ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿತು.
ಜೆಸಿ ನಗರದ ಗೂಡ್ಸ್ಶೆಡ್ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಬಿಜೆಪಿಯ ಯುವಮೋರ್ಚಾದ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ಪಿ.ಸಿ.ಮೋಹನ್, ಬಿಜೆಪಿ ಕಾರ್ಯದರ್ಶಿ ರವಿಕುಮಾರ್ ನೇತೃತ್ವದಲ್ಲಿ ಯುವಮೋರ್ಚಾ ಕಾರ್ಯಕರ್ತರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದುಬಿದ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾರೆಡ್ಡಿ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪಿ.ಸಿ.ಮೋಹನ್, ರಾಜ್ಯದಲ್ಲಿ ಈವರೆಗೂ ಒಟ್ಟು 24 ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂಬುದಕ್ಕೆ ಇದಕ್ಕಿಂತ ನಿದರ್ಶನ ಇನ್ನೇನು ಬೇಕೆಂದು ಪ್ರಶ್ನಿಸಿದರು.
ಕೆಲವು ಸಮಾಜಘಾತುಕ ಶಕ್ತಿಗಳಿಗೆ ಕಾನೂನಿನ ಭಯವಿಲ್ಲ. ಏನೇ ಮಾಡಿದರೂ ಸರ್ಕಾರದ ನೆರವು ಸಿಗುತ್ತದೆ ಎಂಬ ದುರಾಲೋಚನೆಯಲ್ಲಿದ್ದಾರೆ. ಇಂತಹ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಸರ್ಕಾರವೇ ಕೈ ಕಟ್ಟಿ ಕುಳಿತಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.
ಕರಾವಳಿಯಲ್ಲಿ ನಡೆಯುತ್ತಿದ್ದ ಈ ಘಟನೆಗಳು ಬೆಂಗಳೂರು ಮಹಾನಗರಕ್ಕೆ ಕಾಲಿಟ್ಟಿರುವುದು ದುರ್ದೈವದ ಸಂಗತಿ. ನಗರದಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಹಾಡ ಹಗಲೇ ಹೊರಬರಲು ಹೆದರುತ್ತಿದ್ದಾರೆ. ಪ್ರಮುಖ ಸ್ಥಳಗಳಲ್ಲೇ ಮಹಿಳೆಯರ ಮೆಲೆ ದೌರ್ಜನ್ಯ, ಸರಗಳ ಅಪಹರಣ ನಡೆಯುತ್ತಿದ್ದರೂ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ದೂರಿದರು.
ರವಿಕುಮಾರ್ ಮಾತನಾಡಿ, ನಿರ್ದಿಷ್ಟ ಸಂಘಟನೆಯ ಕಾರ್ಯಕರ್ತರನ್ನೇ ಗುರಿಯಾಗಿಟ್ಟುಕೊಂಡು ಬರ್ಬರವಾಗಿ ಹತ್ಯೆ ಮಾಡಲಾಗುತ್ತಿದೆ. ಕದಿರೇಶನ್ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಅವರ ರಾಜಕೀಯ ಏಳಿಗೆ ಸಹಿಸದ ಕೆಲವರು ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ. ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.
ಹೈ ಡ್ರಾಮಾ: ಇದಕ್ಕೂ ಮುನ್ನ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲಿ ದೊಡ್ಡ ಹೈ ಡ್ರಾಮಾವೇ ನಡೆಯಿತು. ಪ್ರತಿಭಟನೆಗೂ ಮುನ್ನವೇ ಯುವಮೋರ್ಚಾ ಕಾರ್ಯಕರ್ತರನ್ನು ಪೆÇಲೀಸರು ಬಂಧಿಸಲು ಯತ್ನಿಸಿದರು.
ಈ ವೇಳೆ ಯುವಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆದಿದ್ದೇವೆ. ಪ್ರತಿಭಟನೆ ನಡೆಸಲು ಅವಕಾಶ ನೀಡದೆ ಬಂಧಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಂತದಲ್ಲಿ ಪೆÇಲೀಸರು ಹಾಗೂ ಪ್ರತಿಭಟನಾನಿರತರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಬಳಿಕ ಪೆÇಲೀಸರು ಅವರನ್ನು ಬಂಧಿಸಿ ಕರೆದೊಯ್ದರು.