ಬೆಂಗಳೂರು,ಫೆ.12-ನಗರದ ವಿವಿಧ ಕಡೆ ರಾತ್ರಿ ವೇಳೆ ಮನೆಯ ಕಾಂಪೌಂಡ್ಗಳಲ್ಲಿ ಹಾಗೂ ಪಾರ್ಕ್ಗಳಲ್ಲಿ ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕದ್ದು ಮಾರಾಟ ಮಾಡಿ ಬಂದ ಹಣದಿಂದ ದುಂದುವೆಚ್ಚ ಮಾಡುತ್ತಿದ್ದ ಐದು ಮಂದಿಯನ್ನು ಬನಶಂಕರಿ ಠಾಣೆ ಪೋಲೀಸರು ಬಂಧಿಸಿ 10 ಲಕ್ಷ ರೂ. ಮೌಲ್ಯದ ಶ್ರೀಗಂಧದ ತುಂಡುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಟಾಟಾ ಸುಮೋ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ತುಮಕೂರು ಮೂಲದ ಮಹಮ್ಮದ್ ಇಮ್ರಾನ್(30), ಫೈಜುಲ್ಲಾ ಖಾನ್(48), ರಂಗಸ್ವಾಮಿ(45), ಸಫೀವುಲ್ಲಾ(30) ಮತ್ತು ಚನ್ನರಾಯಪಟ್ಟಣದ ಉದಯಕುಮಾರ(24) ಬಂಧಿತ ಶ್ರೀಗಂಧ ಚೋರರು.
ಆರೋಪಿಗಳ ಬಂಧನದಿಂದ ನಗರದಲ್ಲಿ ನಡೆದಿದ್ದ 06 ಶ್ರೀಗಂಧ ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು , ಕೆಎಸ್ಲೇಔಟ್ ಠಾಣೆಯ ಎರಡು ಪ್ರಕರಣ, ಬನಶಂಕರಿ, ಬಸವನಗುಡಿ ಠಾಣೆಯ ತಲಾ ಒಂದು ಪ್ರಕರಣ ಹಾಗೂ ವಿದ್ಯಾರಣ್ಯಾಪುರ ಠಾಣೆಯ ಎರಡು ಪ್ರಕರಣಗಳು ಪತ್ತೆಯಾಗಿವೆ.
ಆರೋಪಿಗಳು ಈ ಹಿಂದೆ 2016ನೇ ಸಾಲಿನಿಂದ ಆಗಾಗ್ಗೆ ಟಾಟಾ ಇಂಡಿಕಾ ಕಾರು ಮತ್ತು ಟಾಟಾ ಸುಮೋ ವಾಹನದಲ್ಲಿ ಬೆಂಗಳೂರಿಗೆ ಬಂದು ಕುಮಾರಸ್ವಾಮಿ ಲೇಔಟ್, ವಿದ್ಯಾರಣ್ಯಾಪುರ, ಬಸವನಗುಡಿ ಹಾಗೂ ಬನಶಂಕರಿ ವ್ಯಾಪ್ತಿಗಳಲ್ಲಿ ಸಂಚರಿಸುತ್ತಾ ಶ್ರೀಗಂಧದ ಮರಗಳನ್ನು ಕಳವು ಮಾಡಿ ಅವುಗಳನ್ನು ಮಾರಾಟ ಮಾಡಿ ಬಂದ ಹಣದಿಂದ ದುಂದುವೆಚ್ಚ ಮಾಡುತ್ತಿದ್ದರು.
ಈ ವ್ಯಾಪ್ತಿಗಳಲ್ಲಿ ಶ್ರೀಗಂಧ ಮರ ಕಳ್ಳತನವಾಗುತ್ತಿದ್ದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೋಲೀಸರು ಕಾರ್ಯಾಚರಣೆ ನಡೆಸಿ ಐದು ಮಂದಿ ಶ್ರೀಗಂಧ ಚೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು , ಬಂಧಿತರಿಂದ 138 ಕೆಜಿ ತೂಕದ ಶ್ರೀಗಂಧದ ತುಂಡುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಟಾಟಾಸುಮೋ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ದಕ್ಷಿಣ ವಿಭಾಗದ ಉಪಪೋಲೀಸ್ ಆಯುಕ್ತ ಡಾ.ಶರಣಪ್ಪ ಮಾರ್ಗದರ್ಶನದಲ್ಲಿ ಜಯನಗರ ಉಪವಿಭಾಗದ ಸಹಾಯಕ ಪೋಲೀಸ್ ಕಮೀಷನರ್ ಶ್ರೀನಿವಾಸ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಪುಟ್ಟಸ್ವಾಮಿ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.