ರಾಮಲ್ಲಾ :ಫೆ-11: ಪ್ಯಾಲೆಸ್ಟೀನ್ ಮತ್ತು ಇಸ್ರೇಲ್ ಮಧ್ಯೆ ಶಾಂತಿ ಸ್ಥಾಪಿಸುವಲ್ಲಿ ಭಾರತ ಪಾತ್ರವಹಿಸಬೇಕು ಎಂದು ಪ್ಯಾಲೆಸ್ಟೀನ್ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಮನವಿ ಮಾಡಿಕೊಂಡಿದ್ದಾರೆ.
ಪ್ಯಾಲೆಸ್ಟೀನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಜತೆ ಮಾತುಕತೆ ನಡೆಸಿದ ನಂತರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಬ್ಬಾಸ್ ಈ ಮನವಿ ಮಾಡಿಕೊಂಡಿದ್ದಾರೆ.
ಇದೇ ವೇಳೆ ಸ್ವಾತಂತ್ರ್ಯಸಂಬಧ ಮಾತುಕತೆ ನಡೆಸಲು ನಾವು ಸದಾ ಸಿದ್ಧ. ಆದರೆ, ಪ್ಯಾಲೆಸ್ಟೀನ್ ಮತ್ತು ಇಸ್ರೇಲ್ ಪ್ರತ್ಯೇಕ ದೇಶ ಎಂದು ಹೇಳುವ ‘ಎರಡು ದೇಶ ಪರಿಹಾರ: 1967’ರ ಪ್ರಕಾರವೇ ಮಾತುಕತೆ ನಡೆಯಬೇಕು’ ಎಂದು ಅಬ್ಬಾಸ್ ಷರತ್ತು ವಿಧಿಸಿದ್ದಾರೆ.
ಆರ್ಥಿಕ ಮತ್ತು ಅಧಿಕಾರದ ವಿಚಾರದಲ್ಲಿ ಭಾರತ ಜಾಗತಿಕ ವೇದಿಕೆಯಲ್ಲಿ ಶಕ್ತಿಯುತ ದೇಶವಾಗಿ ಹೊರಹೊಮ್ಮುತ್ತಿದೆ. ಭಾರತ ಅಲಿಪ್ತ ಚಳವಳಿ ಮುನ್ನಡೆಸಿದ್ದು ತಿಳಿದಿದೆ. ಈ ಎಲ್ಲವನ್ನೂ ಗಮನದಲ್ಲಿರಿಸಿಕೊಂಡೇ ಶಾಂತಿ ಮಾತುಕತೆಯಲ್ಲಿ ಭಾರತವು ಅಂತರರಾಷ್ಟ್ರೀಯ ಸಮುದಾಯದ ಪ್ರತಿನಿಧಿಯಾಗಿರಬೇಕು ಎಂದು ನಾವು ಬಯಸುತ್ತೇವೆ. ಇಲ್ಲಿ ಶಾಂತಿ ನೆಲೆಸಲು ನಾವು ಭಾರತವನ್ನು ಅವಲಂಭಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ಪ್ಯಾಲೆಸ್ಟೀನ್ನ ಸ್ನೇಹಸಂಬಂಧ ಹಲವು ಕಠಿಣ ಪರೀಕ್ಷೆಗಳನ್ನು ಜಯಿಸಿದೆ. ಹಲವು ಕಠಿಣ ಸವಾಲುಗಳನ್ನು ಎದುರಿಸುವಲ್ಲಿ ಇಲ್ಲಿಯ ಜನರು ಅಭೂತಪೂರ್ವ ಎದೆಗಾರಿಕೆ ತೋರಿಸಿದ್ದಾರೆ. ಪ್ಯಾಲೆಸ್ಟೀನ್ನ ಅಭಿವೃದ್ಧಿಯ ಪಯಣದಲ್ಲಿ ಭಾರತವು ಯಾವಾಗಲೂ ಜತೆಯಾಗಿರುತ್ತದೆ ಎಂದು ಹೇಳಿದ್ದಾರೆ.
ಇಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಬೇಕು ಎಂದು ಭಾರತ ಬಯಸುತ್ತದೆ. ಮಾತುಕತೆ ಮೂಲಕ ಶಾಶ್ವತ ಪರಿಹಾರ ಸಾಧ್ಯವಿದೆ. ರಾಜತಾಂತ್ರಿಕ ಕ್ರಮಗಳು ಮಾತ್ರವೇ ಹಿಂಸಾಚಾರ ಮತ್ತು ಇತಿಹಾಸದ ಕರಾಳ ಹೊರೆಗಳಿಂದ ಬಿಡುಗಡೆ ನೀಡುತ್ತವೆ. ಅದು ಅಷ್ಟು ಸುಲಭವಲ್ಲ ಎಂಬುದು ನಮಗೂ ಗೊತ್ತಿದೆ. ಆದರೆ ಪ್ರಯತ್ನ ನಡೆಯುತ್ತಲೇ ಇರಬೇಕು ಎಂದರು.