ಬೆಂಗಳೂರು,ಆ.9- ನಗರದಲ್ಲಿ ದಿನೇ ದಿನೇ ಕೊರೊನಾ ಸೋಂಕು ಏರಿಕೆ ಕಂಡು ಬರುತ್ತಿರುವ ಬೆನ್ನಲ್ಲೇ ಲಸಿಕಾ ಅಭಾವ ತಲೆದೋರಿದೆ.
ಲಸಿಕಾ ಕೇಂದ್ರಗಳ ಬಳಿ ಜನ ಲಸಿಕೆ ಪಡೆಯಲು ಕಾದು ಕುಳಿತಿದ್ದರು ವ್ಯಾಕ್ಸಿನ್ ಸಿಗುತ್ತಿಲ್ಲ.
ಲಸಿಕೆ ಪಡೆಯಲು ಜನ ಮುಂಜಾನೆ ಮೂರು ಗಂಟೆಯಿಂದ ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕೆಲವೆಡೆ ಕಂಡು ಬಂದಿದೆ.
ನಗರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಬೆಳಿಗ್ಗೆಯಿಂದಲೇ ಜನ ಸಾಲುಗಟ್ಟಿ ನಿಂತಿದ್ದರು. ಆದರೆ, ಸೆಂಟರ್‍ನಲ್ಲಿ ವ್ಯಾಕ್ಸಿನ್ ಲಭ್ಯವಿಲ್ಲ ಎಂಬ ಬೋರ್ಡ್ ಹಾಕಿ 11 ಗಂಟೆಯಾದರೂ ಸೆಂಟರ್ ತೆರೆಯದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಯಿತು.
ಅದೇ ರೀತಿ ವಸಂತನಗರದಲ್ಲಿರುವ ವ್ಯಾಕ್ಸಿನ್ ಕೇಂದ್ರದ ಬಳಿಯೂ ಜನ ಲಸಿಕೆ ಸಿಗದೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ಮನೆಗಳಿಗೆ ತೆರಳಿದರು.
ಇನ್ನು ನಗರದ ಬಹುತೇಕ ಕೇಂದ್ರಗಳಲ್ಲೂ ಲಸಿಕೆ ಸಿಗದೆ ಜನ ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.