ಭ್ರಷ್ಟಾಚಾರ ಆರೋಪ ಪ್ರಕರಣ : ಬಿ.ವೈ.ವಿಜಯೇಂದ್ರ ಸೇರಿದಂತೆ ಎಂಟು ಮಂದಿ ಪ್ರತಿವಾದಿಗಳಿಗೆ ಹೈಕೋರ್ಟ್ ನೋಟಿಸ್ ಜಾರಿಮಾಡಿದೆ

ಬೆಂಗಳೂರು, ಆ.3- ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪುತ್ರ ಬಿ.ವೈ.ವಿಜಯೇಂದ್ರ ಸೇರಿದಂತೆ ಎಂಟು ಮಂದಿ ಪ್ರತಿವಾದಿಗಳಿಗೆ ಹೈಕೋರ್ಟ್ ಇಂದು ನೋಟಿಸ್ ಜಾರಿಮಾಡಿ ವಿಚಾರಣೆಯನ್ನು ಆಗಸ್ಟ್ ಎರಡನೆ ವಾರಕ್ಕೆ ಮುಂದೂಡಿದೆ.

ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‍ಗೆ ಪೂರ್ವಾನುಮತಿ ಸಿಗದಿದ್ದಕ್ಕೆ ಕೇಸು ವಜಾಗೊಂಡ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಟಿ.ಜೆ.ಅಬ್ರಾಹಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಶಶಿಧರ್ ಮರಡಿ, ಸಂಜಯ್ ಶ್ರೀ, ಚಂದ್ರಕಾಂತ್, ರಾಮಲಿಂಗಂ, ಎಸ್.ಟಿ.ಸೋಮಶೇಖರ್, ಡಾ.ಜಿ.ಸಿ.ಪ್ರಕಾಶ್, ಕೆ.ರವಿ, ವಿರೂಪಾಕ್ಷಪ್ಪ, ಯಮಕನಮರಡಿ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಪ್ರಸ್ತುತ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿಲ್ಲದಿರುವುದರಿಂದ ಪೂರ್ವಾನುಮತಿ ಅಗತ್ಯವಿಲ್ಲ ಎಂದು ಟಿ.ಜೆ.ಅಬ್ರಾಹಂ ಪರ ವಕೀಲರು ವಾದ ಮಂಡಿಸಿದ್ದರು.

ಪೂರ್ವಾನುಮತಿ ಕುರಿತಾಗಿ ವಾದ ಆಲಿಸಬೇಕಾದ ಅಗತ್ಯತೆ ಹಿನ್ನೆಲೆಯಲ್ಲಿ ಹೈಕೋರ್ಟ್‍ನ ಏಕಸದಸ್ಯ ಪೀಠ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತು.

ಬಿಎಸ್‍ವೈ ಕುಟುಂಬದವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ, ನಕಲಿ ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದು, ಸರ್ಕಾರದ ವಿವಿಧ ಯೋಜನೆಗಳಲ್ಲಿ ಕೋಟ್ಯಂತರ ರೂ. ಕಿಕ್‍ಬ್ಯಾಕ್ ಪಡೆದಿದ್ದು, ತನಿಖೆ ನಡೆಸಬೇಕೆಂದು ಎಸಿಬಿಗೆ ದೂರು ನೀಡಿದ್ದು, ತನಿಖೆ ನಡೆಸಿದ್ದ ಎಸಿಬಿ ದೂರನ್ನು ಕೈ ಬಿಟ್ಟಿತ್ತು.

ಇದನ್ನು ಪ್ರಶ್ನಿಸಿದ್ದ ಅಬ್ರಾಹಂ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಮುಖ್ಯಮಂತ್ರಿಯವರು ಸಾಂವಿಧಾನಿಕ ಹುದ್ದೆಯಲ್ಲಿರುವುದರಿಂದ ಪ್ರಾಸಿಕ್ಯೂಷನ್‍ಗೆ ರಾಜ್ಯಪಾಲರ ಪೂರ್ವಾನುಮತಿ ಪಡೆದಿಲ್ಲ ಎಂದು ವಿಶೇಷ ನ್ಯಾಯಾಲಯ ಅಬ್ರಾಹಂ ಅವರ ಖಾಸಗಿ ದೂರನ್ನು ವಜಾಗೊಳಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ