ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವದ ವಿರುದ್ಧ ಸಡ್ಡು ಹೊಡೆದಿದ್ದ ಪ್ರಮುಖ ಮೂವರಿಗೆ ಮಂತ್ರಿ ಸ್ಥಾನ ಕೈ ತಪ್ಪಿದೆ

ಬೆಂಗಳೂರು,ಆ.4- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವದ ವಿರುದ್ಧ ಸಡ್ಡು ಹೊಡೆದಿದ್ದ ಪ್ರಮುಖ ಮೂವರಿಗೆ ಮಂತ್ರಿ ಸ್ಥಾನ ಕೈ ತಪ್ಪಿದೆ.
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಅವರಿಗೆ ಸಚಿವ ಸ್ಥಾನ ತಪ್ಪಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.

ಈ ಮೂವರು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಗಳಾಗುತ್ತಾರೆ ಎಂಬ ನಿರೀಕ್ಷೆ ಮಾಡಲಾಗಿತ್ತು. ಅದರಲ್ಲೂ ಒಕ್ಕಲಿಗ ಸಮುದಾಯದಿಂದ ಸಿ.ಪಿ.ಯೋಗೇಶ್ವರ್, ವೀರಶೈವ ಲಿಂಗಾಯಿತ ಪಂಚಮಸಾಲಿ ಸಮುದಾಯದಿಂದ ಅರವಿಂದ ಬೆಲ್ಲದ್ ಉಪಮುಖ್ಯಮಂತ್ರಿಗಳಾಗುತ್ತಾರೆ ಎಂಬ ವದಂತಿಯೂ ಕೇಳಿ ಬಂದಿತ್ತು.

ಅದರಲ್ಲೂ ಬಿಜಾಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ಹಿಂದೆ ಮುಖ್ಯಮಂತ್ರಿರೇಸ್‍ನಲ್ಲಿ ಇದ್ದರು. ಯಾವಾಗ ಸಿಎಂ ಸ್ಥಾನ ಕೈ ತಪ್ಪಿತೋ ಕಡೆ ಪಕ್ಷ ನಮ್ಮನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕೆಂದು ಅವರು ದುಂಬಾಲು ಬಿದ್ದಿದ್ದರು.

ಒಂದು ವೇಳೆ ಬಸವನಗೌಡ ಪಾಟೀಲ್ ಯತ್ನಾಳ್, ಸಿ.ಪಿ.ಯೋಗೇಶ್ವರ್, ಅರವಿಂದ್ ಬೆಲ್ಲದ್ ಅವರನ್ನು ಸಂಪುಟಕ್ಕೆ ತೆಗೆದುಕೊಂಡರೆ ನಮ್ಮ ಪುತ್ರ ಬಿ.ವೈ.ವಿಜಯೇಂದ್ರನನ್ನು ಸಂಪುಟಕ್ಕೆ ತೆಗೆದುಕೊಳ್ಳುವುದರ ಜತೆಗೆ ಡಿಸಿಎಂ ಸ್ಥಾನಮಾನ ನೀಡಬೇಕೆಂದು ಯಡಿಯೂರಪ್ಪ ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದರು. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಚಾಣಾಕ್ಷತವನ್ನು ಬಿಎಸ್‍ವೈ ಮೆರೆದಿದ್ದಾರೆ.

ಹೇಗಿದ್ದರೂ ತಮ್ಮ ಪುತ್ರ ವಿಜಯೇಂದ್ರನನ್ನು ಸಂಪುಟಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬುದು ಖಾತರಿ ಪಡಿಸಿಕೊಂಡಿದ್ದ ಯಡಿಯೂರಪ್ಪ, ಅದೇ ವೇಳೆ ತಮ್ಮ ಕುರ್ಚಿಗೆ ಕಂಟಕ ತಂದ ಈ ಮೂವರನ್ನು ಸಂಪುಟಕ್ಕೆ ತೆಗೆದುಕೊಂಡರೆ ಸರ್ಕಾರದ ಸ್ಥಿರತೆ ಬಗ್ಗೆ ಯಾವುದೇ ಖಚಿತತೆ ಕೊಡುವುದಿಲ್ಲ ಎಂಬ ದಾಳವನ್ನು ಉದುರಿಸಿದ್ದರು ಎನ್ನಲಾಗಿದೆ.

ಹೀಗಾಗಿಯೇ ಕೊನೆ ಕ್ಷಣದವರೆಗೂ ಅಳೆದು ತೂಗಿ ವರಿಷ್ಠರು ಯಡಿಯೂರಪ್ಪ ವಿರೋಧಿ ಬಣದಲ್ಲಿದ್ದ ಈ ಮೂವರನ್ನು ಸಂಪುಟಕ್ಕೆ ಪರಿಗಣಿಸಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ