ಕೋವಿಡ್-19 ಮೂರನೇ ಅಲೆಯ ಭೀತಿ ರಾಜ್ಯಕ್ಕೆ ತಟ್ಟುತ್ತಿರುವುದು ಆತಂಕಕಾರಿ: ದಿನೇಶ್ ಗುಂಡೂರಾವ್

ಬೆಂಗಳೂರು,ಆ.2- ಕೋವಿಡ್-19 ಮೂರನೇ ಅಲೆಯ ಭೀತಿ ರಾಜ್ಯಕ್ಕೆ ತಟ್ಟುತ್ತಿರುವುದು ಆತಂಕಕಾರಿ ವಿದ್ಯಮಾನವಾಗಿದೆ. ಸರ್ಕಾರ ನಿರ್ಲಕ್ಷ್ಯ ವಹಿಸದಂತೆ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ಕೊರೊನಾ 2ನೇ ಅಲೆಯ ದುರಂತದಿಂದ ನಾವಿನ್ನು ಚೇತರಿಸಿಕೊಂಡಿಲ್ಲ. ಈ ಮಧ್ಯೆ 3ನೇ ಅಲೆಯ ಆತಂಕ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಟ್ವಿಟರ್‍ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಈ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡಬಾರದು. ಗಡಿ ಭಾಗಗಳಲ್ಲಿ ಅಗತ್ಯ ತಪಾಸಣೆ ನಡೆಸಬೇಕು. ಯಾರೂ ರಾಜ್ಯ ಪ್ರವೇಶಿಸದಂತೆ ಎಚ್ಚರಿಕೆ ಕ್ರಮ ವಹಿಸಬೇಕು. 2ನೇ ಅಲೆ ಸಂದರ್ಭದಲ್ಲಿ ಸಾಕಷ್ಟು ಸಾವುನೋವುಗಳನ್ನು ಅನುಭವಿಸಿದ್ದೇವೆ. ಲಕ್ಷಾಂತರ ಜನ ಕೊರೊನಾ ರೋಗಪೀಡಿತರಾದರು. ಸಾವಿರಾರು ಜನ ಸಾವನ್ನಪ್ಪಿದರು.

3ನೇ ಅಲೆಯಲ್ಲಿ ಇದು ಮರುಕಳಿಸಬಾರದು. ಮುನ್ನೆಚ್ಚರಿಕೆ ಕ್ರಮವೇ ಸೂಕ್ತ. ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಜೊತೆಗೆ ಸಾರ್ವಜನಿಕರು ಕೂಡ ಎಚ್ಚರಿಕೆ ವಹಿಸಬೇಕು. ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ