ಬಿಜೆಪಿ ಶಾಸಕರು ಬೆಂಗಳೂರಿನಲ್ಲಿ ಠಿಕಾಣಿ, ಜನರ ಜೀವಕ್ಕಿಂತ ಅಧಿಕಾರ ಮುಖ್ಯವಾಗಿದೆ: ಸಿದ್ದರಾಮಯ್ಯ

ಕಾರವಾರ,ಆ.2- ಬಿಜೆಪಿ ಶಾಸಕರು ಬೆಂಗಳೂರಿನಲ್ಲಿ ಠಿಕಾಣಿ ಹೂಡಿ, ಮಂತ್ರಿ ಪದವಿಗಾಗಿ ಲಾಬಿ ಮಾಡುತ್ತಿದ್ದಾರೆಯೇ ಹೊರತು ಒಬ್ಬ ಶಾಸಕನು ತಮ್ಮ ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡುತ್ತಿಲ್ಲ. ಇವರಿಗೆ ಜನರ ಜೀವಕ್ಕಿಂತ ಅಧಿಕಾರ ಮುಖ್ಯವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೊರೊನಾ ಒಂದು ಹಾಗೂ ಎರಡನೆ ಅಲೆಯಿಂದ ನಾವು ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಸೂಕ್ತ ಆಸ್ಪತ್ರೆ, ಹಾಸಿಗೆಗಳು, ವೆಂಟಿಲೇಟರ್, ಆಕ್ಸಿಜನ್ ಇಲ್ಲದೆ ಸಾವಿರಾರು ಜನ ಸಾವಿಗೀಡಾಗಿದ್ದಾರೆ. ಇದು ಮತ್ತೆ ಮರುಕಳಿಸದಂತೆ ತಡೆಯಬೇಕು. ಇದನ್ನು ಬಿಟ್ಟು ಮುಖ್ಯಮಂತ್ರಿಗಳು ಮಂತ್ರಿಮಂಡಲ ರಚನೆಗೆ ಓಡಾಡುತ್ತಿದ್ದಾರೆ. ಒಮ್ಮೆ ದೆಹಲಿಗೆ ಹೋಗಲಿ, ಪದೇ ಪದೇ ಹೋಗುವ ಅಗತ್ಯವೇನಿದೆ? ಬಿಜೆಪಿ ಹೈಕಮಾಂಡ್ ಕೂಡ ರಾಜ್ಯದ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಗುಡುಗಿದರು.

ಬಸವರಾಜ ಬೊಮ್ಮಾಯಿಯವರು ಈಗಷ್ಟೇ ಮುಖ್ಯಮಂತ್ರಿಯಾಗಿದ್ದಾರೆ. ಅವರ ಬಗ್ಗೆ ಟೀಕೆ ಮಾಡುವುದಿಲ್ಲ. ಆದರೆ, ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ ಕೊಡಬೇಕು ಎಂದು ಒತ್ತಾಯಿಸಿದರು.

ಲಾಕ್‍ಡೌನ್ ಹೇರುವಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ಕಳೆದೆರಡು ದಿನಗಳಿಂದ ಸೋಂಕಿನ ಪ್ರಮಾಣ ಎರಡು ಸಾವಿರ ಸಮೀಪದಲ್ಲಿದೆ. ಇದು ಎರಡು ಸಾವಿರದ ಗಡಿ ದಾಟಿದರೆ ಮೂರನೆ ಅಲೆ ಶುರುವಾಗಿದೆ ಎಂದರ್ಥ ಎಂದು ಆತಂಕ ವ್ಯಕ್ತಪಡಿಸಿದರು.

ರೇಣುಕಾಚಾರ್ಯ ಅವರು ತಮ್ಮ ವಿರುದ್ಧ ಮಾನಹಾನಿಯಾಗುವಂತ ವೀಡಿಯೋ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ತಮ್ಮ ವೀಡಿಯೋ ಬರಬಹುದು ಎಂಬ ಅನುಮಾನ ಸುಮ್ಮಸುಮ್ಮನೆ ರೇಣುಕಾಚಾರ್ಯ ಅವರಿಗೆ ಏಕೆ ಬರುತ್ತದೆ ಎಂದು ಪ್ರಶ್ನಿಸಿದರು.

ಕೊರೊನಾ ಮೂರನೆ ಅಲೆ ನಮ್ಮ ರಾಜ್ಯಕ್ಕೆ ಬರದಂತೆ ತಡೆಯುವುದು ಸರ್ಕಾರದ ಆದ್ಯತೆಯಾಗಬೇಕು. ನೆರೆಯ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಮೂರನೆ ಅಲೆ ಈಗಾಗಲೇ ಬಂದಿದ್ದು, ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಈ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬರುವವರ ಪ್ರಮಾಣ ಹೆಚ್ಚಾಗಿರುವುದರಿಂದ ರಾಜ್ಯದ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಬೇಕು. ಕಟ್ಟುನಿಟ್ಟಾಗಿ ತಪಾಸಣೆ ನಡೆಸಿ, ಎರಡು ಡೋಸ್ ಲಸಿಕೆ ಪಡೆಯದವರನ್ನು ಗಡಿ ಒಳಗೆ ಬಿಡಬಾರದು ಹಾಗೂ ಪರೀಕ್ಷೆ ನಡೆಸಿ ನೆಗೆಟಿವ್ ವರದಿ ತಂದವರನ್ನು ಮಾತ್ರ ಒಳಗೆ ಬಿಡಬೇಕು ಎಂದು ಸಲಹೆ ನೀಡಿದ್ದಾರೆ.

ಭಾರತೀಯ ಜನತಾ ಪಕ್ಷದವರು ತಾವು ಮಹಾನ್ ಸುಸಂಸ್ಕøತರು ಎಂದು ಹೇಳಿಕೊಳ್ಳುತ್ತಾರೆ. ವಾಸ್ತವದಲ್ಲಿ ಇವರಷ್ಟು ಭಂಡರು ಯಾರೂ ಇಲ್ಲ. ಜೆಡಿಎಸ್ ಈಗ ಜಾತ್ಯಾತೀತ ಪಕ್ಷವಾಗಿ ಉಳಿದಿಲ್ಲ, ಜಾತ್ಯಾತೀತ ಸಿದ್ದಾಂತ ಬಿಟ್ಟು ತುಂಬಾ ಸಮಯವಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ