ಮೊದಲ ದಿನವೇ ಬಂಪರ್ ಕೊಡುಗೆ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ ರೈತ ಮಕ್ಕಳ ಶಿಷ್ಯವೇತನಕ್ಕೆ 1000 ಕೋಟಿ

ಬೆಂಗಳೂರು: ನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲ ಗಂಟೆಯಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಜನರಿಗೆ ಎರಡು ಬಂಪರ್ ಕೊಡುಗೆಗಳನ್ನು ಘೋಷಿಸಿದರು.

ರಾಜಭವನದಿಂದ ನೇರವಾಗಿ ವಿಧಾನಸೌಧದಲ್ಲಿನ ತಮ್ಮ ಕೊಠಡಿಗೆ ಆಗಮಿಸಿ ಪೂಜೆ ಸಲ್ಲಿಸಿದರು. ಬಳಿಕ ಏಕವ್ಯಕ್ತಿ ಸಂಪುಟ ಸಭೆ ನಡೆಸಿ, 2 ಮಹತ್ತ್ವದ ನಿರ್ಣಯಗಳನ್ನು ಕೈಗೊಂಡರು. ಇಷ್ಟು ದಿನ ಯಡಿಯೂರಪ್ಪ ನೇತೃತ್ವದ ಸಂಪುಟ ಸಭೆಯ ವಿಷಯಗಳನ್ನು ಮಾಧ್ಯಮಗಳ ಮೂಲಕ ನಾಡಿನ ಜನರಿಗೆ ತಿಳಿಸುತ್ತಿದ್ದ ಅವರು, ಈ ಬಾರಿ ತಾವೇ ಸಿಎಂ ಆಗಿ ಕೈಗೊಂಡ ನಿರ್ಣಯಗಳನ್ನು ತಾವೇ ಪ್ರಕಟಿಸಿದ್ದು ವಿಶೇಷವಾಗಿತ್ತು.

ಬುಧವಾರ ಸಂಪುಟ ಸಭೆ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ರೈತರು ಹಾಗೂ ಬಡವರಿಗೆ ನೆರವಾಗುವ ಕಾರ್ಯಕ್ರಮ ಜಾರಿಗೊಳಿಸುವುದಾಗಿ ಹೇಳಿದ್ದೆ. ಅದರ ಪ್ರಥಮ ಹೆಜ್ಜೆಯಾಗಿ 2 ಕಾರ್ಯಕ್ರಮಗಳನ್ನು ಘೋಷಿಸುತ್ತಿರುವುದಾಗಿ ಪ್ರಕಟಿಸಿದರು.

ಉನ್ನತ ವ್ಯಾಸಂಗಕ್ಕೆ ಶಿಷ್ಯವೇತನ
ರೈತರ ಮಕ್ಕಳು ಹಾಗೂ ಅವರ ವಿದ್ಯಾಭ್ಯುದಯದ ಬಗ್ಗೆ ಚಿಂತನೆ ನಡೆಸಿದ್ದು, ರೈತ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗದೆಯೇ ಮುಖ್ಯವಾಹಿನಿಗೆ ಬರಬೇಕೆಂಬುದು ನನ್ನ ಉದ್ದೇಶ. ಹೀಗಾಗಿ ಉನ್ನತ ವ್ಯಾಸಂಗ ಮಾಡುವ ರೈತ ಮಕ್ಕಳಿಗೆ ಶಿಷ್ಯವೇತನ ನೀಡಲು ನಿರ್ಧರಿಸಿದ್ದು, ಇದಕ್ಕಾಗಿ ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇನೆ. ಈ ವರ್ಷವೇ ಇದನ್ನು ಅನುಷ್ಠಾನಗೊಳಿಸುತ್ತೇನೆ ಎಂದರು.

ಅಶಕ್ತರಿಗೆ ಸಾಮಾಜಿಕ ಭದ್ರತೆ
ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಇರುವ ಸಂಧ್ಯಾ ಸುರಕ್ಷಾ, ವಿಧವಾ ವೇತನ ಮತ್ತು ವಿಶಿಷ್ಟಚೇತನರ ಮಾಸಾಶನ ಹೆಚ್ಚಿಸಿದ್ದು, ಇದಕ್ಕಾಗಿ ಒಟ್ಟಾರೆ 1,367.52 ಕೋಟಿ ರೂ. ಮೀಸಲಿಟ್ಟಿದ್ದೇನೆ.

ಸಾವಿರ ರೂ. ಇದ್ದ ಸಂಧ್ಯಾ ಸುರಕ್ಷಾ ಮೊತ್ತವನ್ನು 1200 ರೂ.ಗೆ ಹೆಚ್ಚಿಸಿದ್ದು, ಇದರಿಂದ 35.98 ಲಕ್ಷ ಫಲಾನುಭವಿಗಳಿಗೆ ಪ್ರಯೋಜನ ಆಗಲಿದೆಯಲ್ಲದೆ, 863.52 ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದೆ.

ಇಷ್ಟು ದಿನ 600 ರೂ. ಕೊಡುತ್ತಿದ್ದ ವಿಧವಾವೇತನವನ್ನು 800 ರೂ.ಗೆ ಏರಿಸಿದ್ದು, 17.25 ಲಕ್ಷ ಫಲಾನುಭವಿಗಳಿಗೆ ಉಪಯೋಗವಾಗಲಿದೆ. ಇದಕ್ಕೆ 414 ಕೋಟಿ ರೂ. ಹೆಚ್ಚುವರಿ ವೆಚ್ಚ ಆಗಲಿದೆ. ಶೇ.40-75ರಷ್ಟು ವೈಕಲ್ಯ ಹೊಂದಿದವರಿಗೂ ಮಾಸಾಶನವನ್ನು 600 ರೂ.ನಿಂದ 800 ರೂ.ಗೆ ಹೆಚ್ಚಿಸಿದ್ದು, 3.66 ಲಕ್ಷ ಫಲಾನುಭವಿಗಳಿಗೆ ನೆರವು ಸಿಗಲಿದೆ. ಇದರಿಂದ 90 ಕೋಟಿ ರೂ. ಹೆಚ್ಚುವರಿ ವೆಚ್ಚ ಬರಲಿದೆ.

ರಾಜ್ಯದ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ರೈತರು ಹಾಗೂ ಬಡವರಿಗೆ ನೆರವಾಗುವ ಕಾರ್ಯಕ್ರಮ ಜಾರಿಗೊಳಿಸುವುದಾಗಿ ಹೇಳಿದ್ದೆ. ಇದು ನನ್ನ ಚಿಂತನೆಯ ಮೊದಲನೇ ಹೆಜ್ಜೆ. ಬರುವ ದಿನಗಳಲ್ಲಿ ಜನ ಕಲ್ಯಾಣದ ಮೂಲಕ ದೀನದಲಿತರು, ದುಡಿಯುವ ವರ್ಗ, ಮಹಿಳೆಯರು, ಸಾಮಾಜಿಕ ಭದ್ರತೆ ಆವಶ್ಯಕತೆ ಇರುವ ಎಲ್ಲರೊಂದಿಗೆ ನಮ್ಮ ಸರ್ಕಾರ ನಿಲ್ಲುತ್ತದೆ.
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ