ಕೆಪಿಸಿಸಿಗೆ ಪದಾಧಿಕಾರಿಗಳ ನೇಮಕ, ರಾಹುಲ್‍ಗಾಂಧಿ ಅವರ ಸಮ್ಮುಖದಲ್ಲಿ ಮಹತ್ವದ ಸಮಾಲೋಚನೆ

ಬೆಂಗಳೂರು, ಜು.20- ಕೆಪಿಸಿಸಿಗೆ ಪದಾಧಿಕಾರಿಗಳ ನೇಮಕ, ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಹುಲ್‍ಗಾಂಧಿ ಅವರ ಸಮ್ಮುಖದಲ್ಲಿ ಮಹತ್ವದ ಸಮಾಲೋಚನೆ ನಡೆಸಿದ್ದಾರೆ.

ನವದೆಹಲಿ ಪ್ರವಾಸದಲ್ಲಿರುವ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಇಂದು ಹೈಕಮಾಂಡ್ ಹಿರಿಯ ನಾಯಕರನ್ನು ಭೇಟಿ ಮಾಡಿದರು.
ಕಾಂಗ್ರೆಸ್‍ನಲ್ಲಿ ಸೃಷ್ಟಿಯಾಗಿರುವ ಗೊಂದಲಗಳನ್ನು ಬಗೆಹರಿಸಲು ಈ ಸಭೆ ಅತ್ಯಂತ ಮಹತ್ವದ್ದಾಗಿದ್ದು, ಮುಂದಿನ ಮುಖ್ಯಮಂತ್ರಿ ವಿವಾದ, ಗುಂಪುಗಾರಿಕೆ, ಅಭ್ಯರ್ಥಿಗಳ ಆಯ್ಕೆಯ ಮಾನದಂಡ, ಪಕ್ಷ ಸಂಘಟನೆ ಸೇರಿದಂತೆ ನಾನಾ ವಿಚಾರಗಳು ಚರ್ಚೆಯಾಗಿವೆ.

ಇತ್ತೀಚೆಗೆ ಮುಂದಿನ ಮುಖ್ಯಮಂತ್ರಿ ಕುರಿತು ಪಕ್ಷದ ನಾಯಕರು ನೀಡಿದ್ದ ಹೇಳಿಕೆಗಳು ಕಾಂಗ್ರೆಸ್‍ಗೆ ತೀವ್ರ ಮುಜುಗರ ತಂದಿಟ್ಟಿದ್ದಲ್ಲದೆ ಪಕ್ಷದ ವರ್ಚಸ್ಸಿನ ಧಕ್ಕೆಗೂ ಕಾರಣವಾಗಿತ್ತು.

ಸಿದ್ದರಾಮಯ್ಯ ಅವರ ಪರವಾಗಿ ಜಮೀರ್ ಅಹಮ್ಮದ್ ಸೇರಿದಂತೆ ಬಹಳಷ್ಟು ಮಂದಿ ಶಾಸಕರು ಬ್ಯಾಟ್ ಬೀಸಿದ್ದರು. ಇದು ಪಕ್ಷದಲ್ಲಿ ಹಿರಿಯ ನಾಯಕರ ಕೆಂಗಣ್ಣಿಗೆ ಗುರಿಯಾಗಿ ಕೆಲವರು ಪ್ರತ್ಯೇಕ ಸಭೆಗಳನ್ನು ನಡೆಸಿ ಅಸಮಾಧಾನ ಹೊರಹಾಕಿದ್ದಲ್ಲದೆ ಸಿದ್ದರಾಮಯ್ಯ ಅವರ ಬೆಂಬಲಿಗರನ್ನು ನಿಯಂತ್ರಣದಲ್ಲಿಡಬೇಕೆಂಬ ಒತ್ತಡಕ್ಕೂ ಕಾರಣವಾಗಿತ್ತು.

ಈ ವಿವಾದ ಉದ್ವಿಗ್ನ ಸ್ಥಿತಿಯಲ್ಲಿರುವಾಗಲೇ ದೆಹಲಿಗೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಹೈಕಮಾಂಡ್‍ಗೆ ದೂರು ನೀಡಿದ್ದರು. ಅದರಂತೆ ಇಬ್ಬರೂ ನಾಯಕರೊಂದಿಗೆ ಮುಖಾಮುಖಿ ಚರ್ಚಿಸಲು ಹೈಕಮಾಂಡ್ ಮುಂದಾಗಿದ್ದು, ಇಬ್ಬರಿಗೂ ಬುಲಾವ್ ನೀಡಿತ್ತು.

ನಿನ್ನೆ ಸಂಜೆಯೇ ದೆಹಲಿಗೆ ತೆರಳಿದ ಈ ಇಬ್ಬರು ನಾಯಕರು ಕಾಂಗ್ರೆಸ್ ವರಿಷ್ಠಮಂಡಳಿಯಲ್ಲಿರುವ ರಣದೀಪ್ ಸುರ್ಜೆವಾಲಾ, ಕೆ.ಸಿ.ವೇಣುಗೋಪಾಲ್ ಸೇರಿದಂತೆ ಅನೇಕ ನಾಯಕರನ್ನು ಭೇಟಿ ಮಾಡಿದ್ದಾರೆ. ಇಂದು ರಾಹುಲ್‍ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಕೆಪಿಸಿಸಿಗೆ ಸುಮಾರು ಎರಡೂವರೆ ವರ್ಷಗಳಿಂದಲೂ ಪದಾಧಿಕಾರಿಗಳಿಲ್ಲ. ದಿನೇಶ್ ಗುಂಡೂರಾವ್ ಅವರು ಅಧ್ಯಕ್ಷರಾಗಿದ್ದಾಗ ಪಕ್ಷವನ್ನು ಸಂಪೂರ್ಣ ಪುನರ್ ಸಂಘಟಿಸುವ ನಿಟ್ಟಿನಲ್ಲಿ ಎಲ್ಲ ಪದಾಧಿಕಾರಿಗಳನ್ನೂ ಅನೂರ್ಜಿತಗೊಳಿಸಿದ್ದರು. ಬಳಿಕ ಹೊಸ ಪದಾಧಿಕಾರಿಗಳನ್ನು ನೇಮಿಸುವ ವೇಳೆಗೆ ಉಪಚುನಾವಣೆ, ಅದರಲ್ಲಿ ಸೋಲು, ಅಧ್ಯಕ್ಷರ ಬದಲಾವಣೆ, ಸರ್ಕಾರ ಬದಲಾವಣೆ ಈ ರೀತಿಯ ನಾನಾ ಬದಲಾವಣೆಗಳಿಂದಾಗಿ ಪದಾಧಿಕಾರಿಗಳ ನೇಮಕಾತಿ ನೆನೆಗುದಿಗೆ ಬಿದ್ದಿದೆ. ಕೊರೊನಾ ಸಂಕಷ್ಟದಿಂದಾಗಿ ಮತ್ತಷ್ಟು ವಿಳಂಬವಾಯಿತು.

ಪಕ್ಷಕ್ಕೆ ಪದಾಧಿಕಾರಿಗಳ ನೇಮಕ ಅತ್ಯಗತ್ಯವಾಗಿದೆ. ಈಗ ಡಿ.ಕೆ.ಶಿವಕುಮಾರ್ ಅವರು ಆಯ್ದ ವ್ಯಕ್ತಿಗಳನ್ನು ಗುರುತಿಸಿ ಹಲವಾರು ರೀತಿಯ ಜವಾಬ್ದಾರಿಗಳನ್ನು ಹಂಚಿಕೆ ಮಾಡಿ ಸಂಘಟನೆಯನ್ನು ಚುರುಕಾಗಿಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅಧಿಕೃತವಾದ ಪದಾಧಿಕಾರಿಗಳಿದ್ದರೆ ಸಂಘಟನೆಗೆ ಉತ್ತರದಾಯಿತ್ವ ಇರುತ್ತದೆ.

ಡಿ.ಕೆ.ಶಿವಕುಮಾರ್ ಅವರು ಸಲ್ಲಿಸಿದ್ದ ಪಟ್ಟಿಗೆ ಹೈಕಮಾಂಡ್ ಅಂಗೀಕಾರ ನೀಡಿರಲಿಲ್ಲ. ಬದಲಾಗಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿದ ಬಳಿಕ ಅನುಮತಿ ನೀಡುವುದಾಗಿ ಹೇಳಿತ್ತು. ಈ ನಿಟ್ಟಿನಲ್ಲಿ ಇಂದಿನ ಸಭೆ ಕುತೂಹಲ ಕೆರಳಿಸಿತ್ತು.

ರಾಹುಲ್‍ಗಾಂಧಿ ಅವರನ್ನು ಭೇಟಿ ಮಾಡುವ ಮುನ್ನ ಸಿದ್ದರಾಮಯ್ಯ ಕರ್ನಾಟಕ ಭವನದಲ್ಲಿ ಹಲವಾರು ನಾಯಕರುಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ