ಇಂತಹ ನಕಾರಾತ್ಮಕ ಮಾನಸಿಕತೆ ಎಂದೂ ಕಂಡಿಲ್ಲ :ವಿಪಕ್ಷ ಗದ್ದಲಕ್ಕೆ ಪ್ರಧಾನಿ ಖೇದ

ಹೊಸದಿಲ್ಲಿ : ಸಂಸತ್ತಿನ ಮುಂಗಾರು ಅವೇಶನದ ಆರಂಭದ ದಿನ ಸೋಮವಾರ ಹೊಸದಾಗಿ ಸೇರ್ಪಡೆಗೊಂಡ ಕೇಂದ್ರ ಸಚಿವರನ್ನು ಮತ್ತು ಉಭಯ ಸದನಗಳಿಗೆ ಆಯ್ಕೆಯಾದ ಹೊಸ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿಯವರು ಸದನಕ್ಕೆ ಪರಿಚಯಿಸವ ವೇಳೆ ವಿಪಕ್ಷಗಳು ಗಲಾಟೆ ಎಬ್ಬಿಸಿದವು. ವಿಪಕ್ಷಗಳ ಇಂತಹ ವರ್ತನೆಯಿಂದ ಬೇಸರಗೊಂಡ ಪ್ರಧಾನಿ ಮೋದಿಯವರು, ಸಂಸತ್ತಿನಲ್ಲೂ ಇಂತಹ ನಕಾರಾತ್ಮಕ ಮನಸ್ಥಿತಿಯನ್ನು ತಾವು ಹಿಂದೆಂದೂ ಕಂಡುದಿಲ್ಲ ಎಂಬುದಾಗಿ ಖೇದದಿಂದ ಹೇಳಿದರು.

ತಮ್ಮ ಸಂಪುಟದ ನೂತನ ಸಚಿವರನ್ನು ಪರಿಚಯಿಸಲು ಲೋಕಸಭೆಯಲ್ಲಿ ಪ್ರಧಾನಿ ಮೋದಿಯವರು ಎದ್ದು ನಿಲ್ಲುತ್ತಿದ್ದಂತೆಯೇ,ಕಾಂಗ್ರೆಸ್ ಮತ್ತಿತರ ವಿಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಕೋಲಾಹಲ ಸೃಷ್ಟಿಸಿದರು. ವಿಪಕ್ಷಗಳ ಇಂತಹ ನಡವಳಿಕೆಯಿಂದ ನೋವಿಗೀಡಾದ ಪ್ರಧಾನಿಯವರು, ಹಲವಾರು ಮಹಿಳೆಯರು,ರೈತ ಮಕ್ಕಳು, ಪರಿಶಿಷ್ಟ ಜಾತಿ-ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಎಲ್ಲರಿಗೂ ಹೆಮ್ಮೆಯ ಸಂಗತಿ. ಆದರೆ ಕೆಲವರಿಗೆ ಇದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ನೋವಿನ ವಿಚಾರ ಎಂದು ಪ್ರತಿಕ್ರಿಯಿಸಿದರು.

ರಾಜ್ಯಸಭೆಯಲ್ಲೂ ಪ್ರಧಾನಿಯವರಿಗೆ ನೂತನ ಸಚಿವರನ್ನು ಪರಿಚಯಿಸಲು ಸಾಧ್ಯವಾಗಿಲ್ಲ. ವಿಪಕ್ಷದ ಸದಸ್ಯರು ಅಲ್ಲೂ ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗೆ ಇಳಿದು ವಿವಿಧ ವಿಷಯಗಳ ಬಗ್ಗೆ ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಮಾತನಾಡಿದ ಮೋದಿಯವರು, ಗ್ರಾಮೀಣ ಭಾರತದ ಜನರು, ಸಾಮಾನ್ಯ ಕುಟುಂಬಗಳಿಂದ ಬಂದವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಆದರೆ ಇಂತಹ ಸಚಿವರನ್ನು ಪರಿಚಯಿಸುವುದನ್ನೇ ಕೆಲವರು ಸಹಿಸುತ್ತಿಲ್ಲ. ಇಂತಹವರಲ್ಲಿ ಮಹಿಳಾ ವಿರೋ ಮನೋಭಾವವೂ ಇದ್ದು, ಇಂತಹ ನಕಾರಾತ್ಮಕ ಮಾನಸಿಕತೆಯನ್ನು ತಾವು ಹಿಂದೆಂದೂ ಕಂಡಿಲ್ಲ ಎಂಬುದಾಗಿ ವಿಪಕ್ಷಗಳ ಅಸಹಿಷ್ಣುತೆ ಬಗ್ಗೆ ಪ್ರಧಾನಿ ಮೋದಿಯವರು ತೀವ್ರ ಅಸಂತೋಷ ವ್ಯಕ್ತಪಡಿಸಿದರು.

ತೀಕ್ಷ್ಣ ಪ್ರಶ್ನೆ ಕೇಳಲಿ, ಉತ್ತರಿಸಲೂ ಬಿಡಲಿ
ಇದಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಪ್ರಧಾನಿ ಮೋದಿಯವರು, ವಿರೋಧಪಕ್ಷಗಳು ಸಂಸತ್ತಿನಲ್ಲಿ ತೀಕ್ಷ್ಣವಾದ ಮತ್ತು ಕಠಿಣವಾದ ಪ್ರಶ್ನೆಗಳನ್ನು ಕೇಳಬೇಕು. ಆದರೆ ಇದೇ ವೇಳೆ, ವಿಪಕ್ಷ ಸದಸ್ಯರ ಪ್ರಶ್ನೆಗಳಿಗೆ ಸೌಹಾರ್ದಯುತ ವಾತಾವರಣದಲ್ಲಿ ಪ್ರತಿಕ್ರಿಯಿಸಲು ಸರ್ಕಾರಕ್ಕೂ ಅವಕಾಶ ನೀಡಬೇಕು ಎಂದು ಒತ್ತಿ ಹೇಳಿದ್ದರು. ಇಡೀ ಜಗತ್ತನ್ನು ಕಾಡುತ್ತಿರುವ ಕೊರೋನಾ ಪಿಡುಗು ಸೇರಿದಂತೆ ಎಲ್ಲ ವಿಷಯಗಳ ಕುರಿತು ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆಗಳನ್ನು ತಾವು ಬಯಸುತ್ತಿರುವುದಾಗಿ ಪ್ರಧಾನಿಯವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ