ಕೊರೋನಾ ಸೋಂಕು:ಏಳು ದಿನಗಳ ಗಣನೆ ಭಾರತ 4ನೇ ಸ್ಥಾನಕ್ಕೆ ಇಳಿದರೂ ನಿರ್ಲಕ್ಷ್ಯ ಸಲ್ಲ

ಹೊಸದಿಲ್ಲಿ : ಅಮೆರಿಕ, ಯುರೋಪ್ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ಕೊರೋನಾ ಸೋಂಕು ಮತ್ತೆ ಉಲ್ಬಣಿಸುತ್ತಿರುವಂತೆಯೇ , ಕಳೆದ ಏಳು ದಿನಗಳ ಗಣನೆಯಂತೆ ಇಂಡೋನೇಶ್ಯಾದಲ್ಲಿ ಈಗ ಗರಿಷ್ಠ ಸಂಖ್ಯೆಯ ಸೋಂಕಿನ ಪ್ರಕರಣಗಳು ದಾಖಲಾಗುತ್ತಿದ್ದು, ಇಂಡೋನೇಷ್ಯಾ ಇದೀಗ ಬ್ರೆಜಿಲನ್ನು ಹಿಂದಿಕ್ಕಿದೆ.

ಹಾಗೆಯೇ 3ನೇ ಸ್ಥಾನದಲ್ಲಿದ್ದ ಭಾರತ ಈಗ ನಾಲ್ಕನೇ ಸ್ಥಾನಕ್ಕೆ ಹೋಗಿದ್ದು, ಬ್ರಿಟನ್ ಭಾರತಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ಹೊಂದಿರುವುದು ಇದಕ್ಕೆ ಕಾರಣವಾಗಿದೆ.

ಇಂಡೋನೇಶ್ಯಾದಲ್ಲಿ ಕಳೆದ ಏಳು ದಿನಗಳಲ್ಲಿ 3.24ಲಕ್ಷ ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಕಳೆದ ವಾರಕ್ಕಿಂತ ಇದು ಶೇ.43ರಷ್ಟು ಹೆಚ್ಚಾಗಿದೆ.

ಬ್ರೆಜಿಲ್‍ನಲ್ಲಿ 2.87ಲಕ್ಷ ಪ್ರಕರಣಗಳು ವರದಿಯಾಗಿದ್ದರೆ, ಬ್ರಿಟನ್‍ನಲ್ಲಿ 2.75ಲಕ್ಷ ಹೊಸ ಕೇಸುಗಳು ದಾಖಲಾಗಿವೆ. ಭಾರತದಲ್ಲಿ ಕಳೆದ ವಾರಕ್ಕಿಂತ ಶೇ.8ರಷ್ಟು ಇಳಿಕೆ ಕಂಡು 2.69ಲಕ್ಷ ಪ್ರಕರಣಗಳು ದಾಖಲಾಗಿರುವುದು ಜಾಗತಿಕ ಕೋವಿಡ್ ಪ್ರಮಾಣವನ್ನು ದಾಖಲಿಸುವ ವಲ್ಡೋಮೀಟರ್‍ನ ಅಂಕಿ-ಸಂಖ್ಯೆಗಳಿಂದ ವ್ಯಕ್ತವಾಗಿದೆ.

ಜಾಗತಿಕವಾಗಿ ಹೆಚ್ಚಳ
ಜಗತ್ತಿನಲ್ಲಿ ಕಳೆದ ವಾರ ಕೋವಿಡ್ -19ಪ್ರಕರಣಗಳಲ್ಲಿ ಶೇ.16ರಷ್ಟು ಹೆಚ್ಚಳ ಕಂಡುಬಂದಿದ್ದು, ಇದರಿಂದ ಮೂರನೇ ಅಲೆ ಆರಂಭವಾಗಿರುವ ಆತಂಕ ಇನ್ನಷ್ಟು ಹೆಚ್ಚಿದೆ. ಯುರೋಪಿನ ದೇಶಗಳಲ್ಲಿ ಭಾರೀ ವೇಗವಾಗಿ ಸೋಂಕು ಹರಡುತ್ತಿದ್ದು ಆಗ್ನೇಯ ಏಶ್ಯಾದಲ್ಲೂ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಇಂಡೋನೇಶ್ಯಾದಲ್ಲಿ ಶೇ.43ರಷ್ಟು ಏರಿಕೆಯಾಗಿದ್ದರೆ, ಮಲೇಶ್ಯಾದಲ್ಲಿ ಶೇ.45, ಥೈಲ್ಯಾಂಡ್‍ನಲ್ಲಿ ಶೇ.38, ಮ್ಯಾನ್ಮಾರ್‍ನಲ್ಲಿ ಶೇ.48, ವಿಯೇಟ್ನಾಮ್‍ನಲ್ಲಿ ಶೇ.130ರಷ್ಟು ಏರಿಕೆ ದಾಖಲಿಸಿದೆ.

ನಮ್ಮ ದೇಶದಲ್ಲೂ ಕೇರಳ, ಮಹಾರಾಷ್ಟ್ರ, ಮಣಿಪುರಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿದ್ದು, ಕೇರಳ, ಮಹಾರಾಷ್ಟ್ರದಿಂದಲೇ ಮೂರನೇ ಅಲೆಯೂ ಅಪ್ಪಳಿಸಲಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ. ದೇಶದಲ್ಲಿ ಹೊಸ ಸೋಂಕು ಪ್ರಕರಣಗಳೀಗ 38,019ರಿಂದ 41,246ಕ್ಕೇರಿಕೆಯಾಗಿರುವುದು ಎಚ್ಚರಿಕೆಯ ಗಂಟೆ ಎಂದು ಕೇಂದ್ರ ಸರಕಾರ ಮತ್ತು ತಜ್ಞರು ಎಚ್ಚರಿಸುತ್ತಿರುವುದಿಲ್ಲಿ ಉಲ್ಲೇಖನೀಯ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ