ಪಾಕ್ ಭಯೋತ್ಪಾದನೆ ನಂಟು ಮುಚ್ಚಿಡಲು ಆರೆಸ್ಸೆಸ್ ಹೆಸರು ಪ್ರಸ್ತಾವಿಸಿದ ಖಾನ್‍

ಹೊಸದಿಲ್ಲಿ : ಪಾಕಿಸ್ತಾನವು ತಾಲಿಬಾನ್ ಸೇರಿದಂತೆ ಭಯೋತ್ಪಾದನೆಯೊಂದಿಗೆ ಹೊಂದಿರುವ ನಂಟನ್ನು ಮುಚ್ಚಿಕೊಳ್ಳಲು , ಭಾರತ-ಪಾಕ್ ಮಾತುಕತೆಗೆ ಆರೆಸ್ಸೆಸ್ ಅಡ್ಡಿ ಎಂದು ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಹೇಳಿರುವುದನ್ನು ಭಾರತ ತರಾಟೆಗೆತ್ತಿಕೊಂಡಿದೆ.

ಪಾಕ್ ಆಡಳಿತಗಾರರು ಪಾಕಿಸ್ತಾನ ರಚನೆಯಾದಂದಿನಿಂದಲೇ ಹೇಗೆ ಸುಳ್ಳು ಮತ್ತು ವಿಷಯುಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇಮ್ರಾನ್ ಖಾನ್ ಹೇಳಿಕೆಯು ತಾಜಾ ಸಾಕ್ಷಿ.ಭಯೋತ್ಪಾದನೆಯೊಂದಿಗಿನ ತನ್ನ ನಂಟನ್ನು ಮುಚ್ಚಿಕೊಳ್ಳಲು ಇಮ್ರಾನ್ ಖಾನ್ ಆರೆಸ್ಸೆಸ್ ಹೆಸರು ತೆಗೆದಿದ್ದಾರೆ ಎಂಬುದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನಾಯಕ ಇಂದ್ರೇಶ್ ಕುಮಾರ್‍ಜೀ ಪ್ರತಿಕ್ರಿಯಿಸಿದ್ದಾರೆ. ಇದಕ್ಕೂ ಮುನ್ನ ಅಪ್ಘಾನಿಸ್ತಾನದಲ್ಲಿ ತಾಲಿಬಾನ್‍ನ ಬರ್ಬರ ಕೃತ್ಯಗಳ ಬಗ್ಗೆ ಮತ್ತು ಭಯೋತ್ಪಾದನೆ ಹಾಗೂ ಮಾತುಕತೆ ಒಟ್ಟಿಗೆ ಸಾಗಲು ಸಾಧ್ಯವೇ ಎಂದು ಇಮ್ರಾನ್ ಖಾನ್‍ರನ್ನು ಪತ್ರಕರ್ತರು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸುವ ಬದಲಿಗೆ ,ಪಾಕಿಸ್ತಾನವು ಭಾರತದ ಜೊತೆ ಮಾತುಕತೆಯನ್ನು ಬಯಸುತ್ತಿದೆ. ಆದರೆ ಆರೆಸ್ಸೆಸ್ ಇದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಇಮ್ರಾನ್ ಖಾನ್ ತಾಷ್ಕೆಂಟ್‍ನಲ್ಲಿ ಹೇಳಿಕೆ ನೀಡಿದ್ದರು.

ಮಾನವತೆಗೇ ಶತ್ರು ಪಾಕ್ ಸಿದ್ಧಾಂತ
ಪಾಕಿಸ್ತಾನಿ ಜನತೆ ಶಾಂತಿಯಿಂದ ಬಾಳಲು ಬಯಸುತ್ತಿದ್ದಾರೆ. ಆದರೆ ಭಯೋತ್ಪಾದನೆಯನ್ನು ಫೋಷಿಸುವ ಪಾಕಿಸ್ತಾನಿ ಆಡಳಿತಗಾರರೇ ಇದಕ್ಕೆ ಅಡ್ಡಿಯಾಗಿದ್ದು, ಪಾಕ್ ನಾಯಕರೇ ಪಾಕ್ ಜನತೆಯ ಪಾಲಿಗೆ ಕಂಟಕರಾಗಿದ್ದಾರೆ.ಪಾಕಿಸ್ತಾನಿ ಸಿದ್ಧಾಂತ ಭಾರತವನ್ನು ಎರಡು ಭಾಗಗಳನ್ನಾಗಿಸಿತು.ಪಾಕ್ ಆಡಳಿತಗಾರರ ತಾಲಿಬಾನಿ ಸಿದ್ಧಾಂತ ಈಗ ಮಾನವೀಯತೆ, ಶಾಂತಿ, ಸಹೋದರತ್ವಕ್ಕೇ ಶತ್ರುವಾಗಿ ಪರಿಣಮಿಸಿದೆ ಎಂಬುದಕ್ಕೆ ಅಪ್ಘಾನ್ ವಿದ್ಯಮಾನಗಳೇ ಸಾಕ್ಷಿ.ಹಾಗೆಯೇ 1971ರಲ್ಲಿ ಇಂತಹುದೇ ವಿಷಯುಕ್ತ ನಡವಳಿಕೆ ಪಾಕಿಸ್ತಾನವನ್ನು ಮತ್ತೊಮ್ಮೆ ವಿಭಜಿಸುವಂತೆ ಮಾಡಿ ಬಾಂಗ್ಲಾ ದೇಶದ ಉದಯಕ್ಕೂ ಕಾರಣವಾಗಿತ್ತು ಎಂದು ಇಂದ್ರೇಶ್‍ಜೀ ಬೊಟ್ಟು ಮಾಡಿದರು.

ಖಾನ್‍ಗೆ ಕೇಂದ್ರ ಸಚಿವ ಕೌಶಲ್ ತರಾಟೆ
ಭಯೋತ್ಪಾದನೆಯ ಮೂಲವೇ ಪಾಕಿಸ್ತಾನ. ಹೀಗಿರುವಾಗ ಇದನ್ನು ಮುಚ್ಚಿಟ್ಟುಕೊಳ್ಳಲು ಪಾಕ್ ಪ್ರಧಾನಿ ಇಮ್ರಾನ್‍ಖಾನ್ ಆರೆಸ್ಸೆಸ್ ಹೆಸರು ತೆಗೆದಿದ್ದು, ಇದಕ್ಕೆ ಯಾವುದೇ ಕಿಮ್ಮತ್ತೂ ಇಲ್ಲ. ಆರೆಸ್ಸೆಸ್ ಸೌಹಾರ್ದವನ್ನು ಬಯಸುವ ಸಂಘಟನೆ ಎಂಬುದಾಗಿ ಕೇಂದ್ರ ಸಚಿವ ಕೌಶಲ್ ಕಿಶೋರ್ ಪ್ರತಿಕ್ರಿಯಿಸಿದ್ದಾರೆ.

ಸೆಂಟ್ರಲ್ -ಸೌತ್ ಏಶ್ಯನ್ ಸಮ್ಮೇಳನದ ಪಾಶ್ರ್ವದಲ್ಲಿ ಖಾನ್ ತಾಲಿಬಾನ್ ಬಗ್ಗೆ ಪ್ರತಿಕ್ರಿಯಿಸುವುದನ್ನು ತಪ್ಪಿಸಲು ಆರೆಸ್ಸೆಸ್ ಹೆಸರನ್ನು ತೆಗೆದಿದ್ದರು .
ಈ ನಡುವೆ ಅಪ್ಘಾನಿಸ್ತಾನದ ಉಪಾಧ್ಯಕ್ಷ ಅಮ್ರುಲ್ಲಾ ಸಾಲೇಹ್ ಅವರು ಕೂಡಾ , ಅಪ್ಘಾನಿಸ್ತಾನದಲ್ಲಿ ಅಟ್ಟಹಾಸಗೈಯ್ಯುತ್ತಿರುವ ತಾಲಿಬಾನಿಗೆ ಪಾಕಿಸ್ತಾನಿ ವಾಯುಪಡೆಯು ನೆರವು ನೀಡುತ್ತಿದೆ ಎಂದು ಬಹಿರಂಗಪಡಿಸಿದ್ದರು .

ಶಿವಸೇನೆ ಖಂಡನೆ
ಆರೆಸ್ಸೆಸ್ ವಿರುದ್ಧ ಹೇಳಿಕೆ ನೀಡಿದ ಪಾಕ್ ಪ್ರಧಾನಿ ಇಮ್ರಾನ್‍ಖಾನ್‍ರನ್ನು ಶಿವಸೇನೆ ತೀವ್ರವಾಗಿ ತರಾಟೆಗೆತ್ತಿಕೊಂಡಿದೆ. ವಿಶ್ವದಲ್ಲಿ ಇಂದು ನಡೆಯುತ್ತಿರುವ ಭಯೋತ್ಪಾದನೆಯ ಮೂಲವೇ ಪಾಕಿಸ್ತಾನವಾಗಿದೆ. ತಾಲಿಬಾನಿನ ಜನಕನೂ ಪಾಕಿಸ್ತಾನವೇ ಆಗಿದೆ. ಇಂದು ಅಪ್ಘಾನಿಸ್ತಾನದಲ್ಲಿ ವಿದೇಶಿ ಪಡೆಗಳು ನಿರ್ಗಮಿಸಿದ ಬೆನ್ನಿಗೇ ಅಪ್ಘಾನ್ ನಾಗರಿಕರ ಮೇಲೆ ಬರ್ಬರ ಕ್ರೌರ್ಯವೆಸಗಿ ಹಿಂಸಾಚಾರ ನಡೆಸುತ್ತಿರುವ ತಾಲಿಬಾನ್‍ಗೆ ಬೆಂಬಲ ನೀಡುತ್ತಿರುವುದೇ ಪಾಕಿಸ್ತಾನ.

ಹೀಗಿರುವಾಗ ಆರೆಸ್ಸೆಸ್ ಹೆಸರನ್ನು ಎತ್ತಿ ಖಾನ್ ಪಾಕಿಸ್ತಾನದ ಕುತ್ಸಿತ ಹುನ್ನಾರಗಳನ್ನು ಮುಚ್ಚಿಟ್ಟುಕೊಳ್ಳಲು ಯತ್ನಿಸುತ್ತಿದ್ದಾರೆ.ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಇದು ಸಮಸ್ತ ಭಾರತೀಯರ ನಿಲುವು ಕೂಡಾ ಇದೇ ಆಗಿದೆ.ಹೀಗಿರುವಾಗ ಆರೆಸ್ಸೆಸ್ ಸಿದ್ಧಾಂತ ಎಂಬುದಾಗಿ ಖಾನ್ ಎಂಬುದಾಗಿ ಹೇಳುತ್ತಿರುವುದಕ್ಕೆ ಯಾವುದೇ ಅರ್ಥವಿಲ್ಲ ಎಂದು ಶಿವಸೇನಾ ವಕ್ತಾರ ಸಂಜಯ್ ರಾವುತ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ