ಮೇಕೆದಾಟುವಿಗೆ ಸಕಾರಾತ್ಮಕ ಸ್ಪಂದನೆ: ಬಿಎಸ್‍ವೈ ಯೋಜನೆ ಅನುಷ್ಠಾನಕ್ಕೆ ಪಿಎಂ ಮೋದಿ ಅಭಯ

ಹೊಸದಿಲ್ಲಿ: ಮೇಕೆದಾಟು ಸೇರಿದಂತೆ ರಾಜ್ಯದ ವಿಳಂಬಿತ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಕಾರಾತ್ಮಕ ನಿಲುವು ವ್ಯಕ್ತವಾಗಿದೆ.

ಶುಕ್ರವಾರ ಸಂಜೆ ಪ್ರಧಾನಿ ಅವರನ್ನು ಖುದ್ದು ಭೇಟಿ ಮಾಡಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು, ಬಹಳ ದಿನಗಳಿಂದಲೂ ರಾಜ್ಯದಲ್ಲಿ ನನೆಗುದಿಯಲ್ಲಿರುವ ಪ್ರಮುಖ ಯೋಜನೆಗಳಿಗೆ ಕೇಂದ್ರದ ಅನುಮತಿ ಬೇಕಿದೆ ಎಂದು ಮನವಿ ಮಾಡಿದರು. ಪ್ರಧಾನಿ ಭೇಟಿ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿ ಮೇಕೆದಾಟು ಸೇರಿದಂತೆ ರಾಜ್ಯದ ಮಹತ್ತರ ಯೋಜನೆಗಳನ್ನು ಪೂರ್ಣಗೊಳಿಸಲು ರಾಜ್ಯದ ಮನವಿಗೆ ಪ್ರಧಾನಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ತಮಿಳುನಾಡಿಗೆ ಬಾಧಕವಲ್ಲ
ಭೇಟಿಗೂ ಮುನ್ನ ಅವರು ಕಾವೇರಿ ಕಣಿವೆಯ ಉದ್ದೇಶಿತ ಮೇಕೆದಾಟು ಯೋಜನೆಯಿಂದ ತಮಿಳುನಾಡು, ಪುದುಚ್ಚೇರಿ ರಾಜ್ಯಗಳ ಹಿತಾಸಕ್ತಿಗೆ ಬಾಧಕವಿಲ್ಲ ಎಂದರು. ಮೇಕೆದಾಟು ಯೋಜನೆ ಕಾರ್ಯಾನುಷ್ಠಾನ ನೂರಕ್ಕೆ ನೂರರಷ್ಟು ಶತಸಿದ್ಧ. ಇದನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು.

ಇಬ್ಬರಿಗೂ ಅನುಕೂಲ
ಯೋಜನೆಯಿಂದ ಕರ್ನಾಟಕ ಮತ್ತು ತಮಿಳುನಾಡು, ಈ ಎರಡೂ ರಾಜ್ಯಗಳಿಗೆ ಎಲ್ಲ ರೀತಿಯಲ್ಲಿಯೂ ಅನುಕೂಲವಿದೆ. ಈ ವಿಷಯವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಪತ್ರದ ಮೂಲಕ ಮನವರಿಕೆ ಮಾಡಲಾಗಿದೆ ಎಂದರು.

ಕರ್ನಾಟಕದ ಕಾವೇರಿ ಕಣಿವೆಯಲ್ಲಿ ಮೇಕೆದಾಟು ಯೋಜನೆ ಕಾರ್ಯಾನುಷ್ಠಾನಗೊಳಿಸಲು ಕಾನೂನಿನ ಪ್ರಕಾರ ರಾಜ್ಯಕ್ಕೆ ಯಾವ ಸಮಸ್ಯೆಯೂ ಇಲ್ಲ . ಇದಕ್ಕೆ ಸಂಬಂಸಿದ ಕ್ರಿಯಾಯೋಜನೆಗೂ ರಾಜ್ಯ ಸರ್ಕಾರ ಒತ್ತು ನೀಡಿದೆ. ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುವಂತಹ ಯೋಜನೆಗೆ ತಮಿಳುನಾಡು ಅಡ್ಡಿ , ಆಕ್ಷೇಪ ಎತ್ತುವ ಪ್ರಮೇಯವೇ ಇಲ್ಲ ಎಂದು ಯಡಿಯೂರಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಾರದ ಹಿಂದೆಯಷ್ಟೆ ತಮಿಳುನಾಡು ನೀರಾವರಿ ಮಂತ್ರಿ ದೊರೈ ಮುರುಗನ್, ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರಸಿಂಗ್ ಶೆಖಾವತ್ ಅವರನ್ನು ಖುದ್ದು ಭೇಟಿ ಮಾಡಿ ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ಒತ್ತಡ ಹೇರಿದ್ದರು. ಮೂರು ದಿನಗಳ ಹಿಂದೆ ಬೆಂಗಳೂರಿಗೆ ಭೇಟಿ ನೀಡಿದ್ದ ಕೇಂದ್ರ ಸಚಿವ ಶೆಖಾವತ್ ಅವರನ್ನು ಖುದ್ದು ಭೇಟಿ ಮಾಡಿದ ಯಡಿಯೂರಪ್ಪ ಈ ಯೋಜನೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು .

ಯೋಜನೆ ಉದ್ದೇಶ
ಚಾಮರಾಜನಗರ ಜಿಲ್ಲೆಯ ಗಡಿಯಂಚಿನಲ್ಲಿ ನಿರ್ಮಿಸಲು ಉದ್ದೇಶಿಸಲಾದ ಮೇಕೆದಾಟು ಯೋಜನೆಯಿಂದ ರಾಜ್ಯವು 4.75 ಟಿಎಂಸಿ ನೀರು ಸಂಗ್ರಹವಾಗಲಿದೆ.

ಅಲ್ಲದೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗಲಿದೆ . 9 ಸಾವಿರ ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಈ ಯೋಜನೆಯಿಂದ ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ನಗರದ ಕೆಲ ಪ್ರದೇಶಗಳಿಗೆ ಕುಡಿಯುವ ನೀರು ಲಭ್ಯವಾಗಲಿದೆ.

ಮೇಕೆದಾಟು ಯೋಜನೆಯಿಂದ ಕರ್ನಾಟಕ ಮತ್ತು ತಮಿಳುನಾಡಿಗೆ ಎಲ್ಲ ರೀತಿಯಲ್ಲಿಯೂ ಅನುಕೂಲವಿದೆ. ಈ ವಿಷಯವನ್ನು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರಿಗೆ ಪತ್ರದ ಮೂಲಕ ಮನವರಿಕೆ ಮಾಡಲಾಗಿದೆ.
ಬಿ.ಎಸ್. ಯಡಿಯೂರಪ್ಪ, ಸಿಎಂ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ