ಜನನ ಪ್ರಮಾಣ ಶೇ. 2.1ಕ್ಕೆ ಇಳಿಸುವ ಗುರಿ

ಹೊಸ ಜನಸಂಖ್ಯಾ ನೀತಿಗೆ ಉ. ಪ್ರದೇಶ ಸಾಂಕೇತಿಕ ಚಾಲನೆ
ಲಖನೌ: ವಿಶ್ವ ಜನಸಂಖ್ಯಾ ದಿನದ ಅಂಗವಾಗಿ ಉತ್ತರ ಪ್ರದೇಶ ಸರ್ಕಾರ ಭಾನುವಾರ 2021-2030ಕ್ಕೆ ಹೊಸ ಜನಸಂಖ್ಯಾ ನೀತಿಯನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಿದೆ.

ಹೊಸ ಜನಸಂಖ್ಯಾ ನೀತಿಯು 2026ರ ವೇಳೆಗೆ ರಾಜ್ಯದ ಜನಸಂಖ್ಯೆ ಪ್ರತಿ ಸಾವಿರಕ್ಕೆ ಜನನ ಪ್ರಮಾಣವನ್ನು ಶೇ. 2.1ಕ್ಕೆ ಮತ್ತು 2030ರ ಹೊತ್ತಿಗೆ ಶೇ. 1.9ಕ್ಕೆ ಇಳಿಸುವ ಗುರಿಯನ್ನು ಹೊಂದಿದೆ. ಪ್ರಸಕ್ತ ರಾಜ್ಯದ ಒಟ್ಟು ಫಲವತ್ತತೆ ಪ್ರಮಾಣ ಶೇ. 2.7 ರಷ್ಟಿದೆ.

ಜನಸಂಖ್ಯೆ ನಿಯಂತ್ರಣ ಕರಡು ಮಸೂದೆಯನ್ನು ರಾಜ್ಯದ ಕಾನೂನು ಆಯೋಗದ ವೆಬ್‍ಸೈಟ್‍ನಲ್ಲಿ ಹಾಕಿದ ಕೆಲ ದಿನಗಳ ಬಳಿಕ ಹೊಸ ನೀತಿ ಬಿಡುಗಡೆಯಾಗಿದೆ.

ರಾಜ್ಯದಲ್ಲಿ ಜನಸಂಖ್ಯೆ ನಿಯಂತ್ರಿಸಲು ಎರಡು ಮಕ್ಕಳ ನಡುವೆ ಅಂತರವಿರಬೇಕು ಎಂದು ಹೊಸ ಜನಸಂಖ್ಯಾ ನೀತಿಗೆ ಸಾಂಕೇತಿಕವಾಗಿ ಚಾಲನೆ ನೀಡಿದ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಮಿತಿ ಮೀರಿ ಹೆಚ್ಚುತ್ತಿರುವ ಜನಸಂಖ್ಯೆಯು ಅಭಿವೃದ್ಧಿಗೆ ಮಾರಕವಾಗಿದ್ದು, ಈ ಹಿನ್ನೆಲೆಯಲ್ಲಿ ಇದನ್ನು ನಿಯಂತ್ರಿಸಲು ಹೆಚ್ಚಿನ ಪ್ರಯತ್ನ ಅತ್ಯಗತ್ಯ ಎಂದಿದ್ದಾರೆ.

ಅಭಿವೃದ್ಧಿಗೆ ಜನಸಂಖ್ಯಾ ಹೆಚ್ಚಳ ಮಾರಕ
ವಿಶ್ವಾದ್ಯಂತ ಆಗಿಂದಾಗ್ಗೆ ಅಭಿವೃದ್ಧಿಗೆ ಜನಸಂಖ್ಯಾ ಹೆಚ್ಚಳವೇ ಕಾರಣವಾಗುತ್ತಿರುವುದು ವ್ಯಕ್ತವಾಗಿದೆ. ಕಳೆದ 4 ದಶಕಗಳಲ್ಲಿ ಈ ಬಗೆಗಿನ ಚರ್ಚೆಗಳು ನಡೆಯುತ್ತಲೇ ಇವೆ. ಅಲ್ಲದೆ, ಬಡತನದೊಂದಿಗೂ ಜನಸಂಖ್ಯಾ ಬೆಳವಣಿಗೆ ಬೆಸೆದುಕೊಂಡಿದ್ದು, ಪ್ರತಿ ಸಮುದಾಯವನ್ನೂ 2021-2030ರ ಜನಸಂಖ್ಯಾ ನೀತಿಯಲ್ಲಿ ಸೇರಿಸಲಾಗಿದೆ ಎಂದು ಆದಿತ್ಯನಾಥ್ ಹೇಳಿದ್ದಾರೆ.

ಜನಸಂಖ್ಯೆ ನಿಯಂತ್ರಣದ ಮೇಲೆ ಕ್ರಮ ಕೈಗೊಂಡಿರುವ ರಾಷ್ಟ್ರಗಳು ಸಕಾರಾತ್ಮಕ ಫಲಿತಾಂಶ ಕಂಡಿವೆ. ಈ ದಿಸೆಯಲ್ಲಿ ಸಮಾಜದ ಎಲ್ಲ ವರ್ಗಗಳನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಹೊಸ ಜನಸಂಖ್ಯಾ ನೀತಿ ಜಾರಿಗೊಳಿಸಲಿದೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ