2020-21ರ ಆರ್ಥಿಕ ಸಮೀಕ್ಷೆ ಮಂಡನೆ ಜಿಡಿಪಿ ದಾಖಲೆಯ ಶೇ.11 ವೃದ್ಧಿ ನಿರೀಕ್ಷೆ

ಹೊಸದಿಲ್ಲಿ: ಭಾರತದ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) 2021-22ರ ಹಣಕಾಸು ವರ್ಷದಲ್ಲಿ ಶೇಕಡ 11ರವರೆಗಿನ ಬೆಳವಣಿಗೆಯೊಂದಿಗೆ ದಾಖಲೆಯ ಪ್ರಗತಿಯನ್ನು ನಿರೀಕ್ಷಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2020-21ರ ಆರ್ಥಿಕ ಸಮೀಕ್ಷೆ ತಿಳಿಸಿದೆ.

ಇದೇ ವೇಳೆ ಕೊರೋನಾದಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು ಮೈನಸ್ ಶೇ. 7.7ಕ್ಕೆ ಕುಸಿಯುವುದಾಗಿ ಅಂದಾಜಿಸಲಾಗಿದೆ ಎಂದು ಶುಕ್ರವಾರ ಆರಂಭವಾದ ಬಜೆಟ್ ಅವೇಶನದ ಹಿನ್ನೆಲೆ ಲೋಕಸಭೆಯಲ್ಲಿ ಸೀತಾರಾಮನ್ ಮಂಡಿಸಿದ ಸಮೀಕ್ಷೆಯು ಹೊರಹಾಕಿದೆ.

ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಹ್ಮಣ್ಯನ್ ಅವರ ಮಾರ್ಗದರ್ಶನದಲ್ಲಿ ಹಣಕಾಸು ಸಚಿವಾಲಯದ ವಾರ್ಷಿಕ ದಾಖಲೆ ತಯಾರಾಗಿದ್ದು, 2020-21ರ ಆರ್ಥಿಕ ವರ್ಷದಲ್ಲಿ ದೇಶದ ವಾರ್ಷಿಕ ಆರ್ಥಿಕಾಭಿವೃದ್ಧಿಯ ಸಾರಾಂಶವನ್ನು ಸಮೀಕ್ಷೆ ಒದಗಿಸುತ್ತದೆ.

ವಿ ಆಕಾರದ ಆರ್ಥಿಕ ಚೇತರಿಕೆಗೆ ಬೃಹತ್ ಲಸಿಕಾ ಅಭಿಯಾನದಿಂದ ಬೆಂಬಲ ದೊರಕಿದೆ. ಇದರಿಂದಾಗಿ ಸೇವಾ ವಲಯ ಮತ್ತು ಹೂಡಿಕೆಯಲ್ಲಿ ಚೇತರಿಕೆಯ ಭರವಸೆಯನ್ನು ನಿರೀಕ್ಷಿಸಲಾಗಿದೆ. ಅದರಂತೆ ಜಿಡಿಪಿಯಲ್ಲಿ 2019-20ಕ್ಕೆ ಹೋಲಿಸಿದರೆ ಶೇ. 2.4ರಷ್ಟು ಬೆಳವಣಿಗೆಯಾಗಲಿದೆ. ಆ ಪ್ರಕಾರ ದೇಶದ ಆರ್ಥಿಕತೆಯು ಕೊರೋನಾಗೂ ಮೊದಲಿದ್ದ ಹಂತವನ್ನು ತಲುಪಲು ಎರಡು ವರ್ಷಗಳು ಬೇಕಾಗುತ್ತದೆ ಎಂದು ಸೂಚಿಸಿದೆ ಎಂದು ಸಮೀಕ್ಷೆ ಹೇಳಿದೆ.

ಅಂತಾರಾಷ್ಟ್ರೀಯ ಹಣಕಾಸು ನಿ(ಐಎಂಎಫ್) ಅಂದಾಜಿನ ಪ್ರಕಾರ, 2021-22ರಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ. 11.5ರಷ್ಟಾಗಲಿದ್ದು, 2022-23ರಲ್ಲಿ ಈ ಪ್ರಮಾಣ ಶೇ. 6.8 ಆಗಲಿದೆ . ಅಲ್ಲದೆ, ಮುಂದಿನ ಎರಡು ವರ್ಷಗಳಲ್ಲಿ ಭಾರತ ವೇಗವಾಗಿ ಬೆಳವಣಿಗೆ ಹೊಂದುವ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ