ಕರ್ನಾಟಕ ಬೆಳೆಗಾರರ ಒಕ್ಕೂಟದ ಸಭೆಯಲ್ಲಿ ಒಕ್ಕೋರಲ ಆಗ್ರಹ ಡಾ.ಕಸ್ತೂರಿ ರಂಗನ್ ವರದಿಯ ಮಾರಕ ಅಂಶಗಳನ್ನು ಕೈಬಿಡಿ

ಮಡಿಕೇರಿ: ಡಾ.ಕಸ್ತೂರಿ ರಂಗನ್ ವರದಿಯಿಂದ ಪಶ್ಚಿಮ ಘಟ್ಟ ವ್ಯಾಪ್ತಿಯ ಬೆಳೆಗಾರರನ್ನು ಒಳಗೊಂಡಂತೆ ಶ್ರೀಸಾಮಾನ್ಯರಿಗೆ ಎದುರಾಗಲಿರುವ ಸಂಕಷ್ಟಗಳಿಗೆ ಸಂಬಂಸಿದ ಮಾರಕ ಅಂಶಗಳನ್ನು ಕೈ ಬಿಡುವಂತೆ ಕರ್ನಾಟಕ ಬೆಳೆಗಾರರ ಒಕ್ಕೂಟ ಆಗ್ರಹಿಸಿದೆ.
ನಗರದ ಬಾಲಭವನದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಎಚ್.ಟಿ. ಮೋಹನ್ ಕುಮಾರ್ ಅಧ್ಯಕ್ಷತೆಯಲ್ಲಿ ಆಯೋಜಿತ ಸಭೆಯಲ್ಲಿ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಕೆ.ಕೆ. ವಿಶ್ವನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಸ್ತೂರಿ ರಂಗನ್ ಅವರು ತಮ್ಮ ವರದಿಯಲ್ಲಿ ಪ್ರಸ್ತಾಪಿಸಿರುವ `ಇಕೋ ಸೆನ್ಸಿಟಿವ್ ಏರಿಯಾ'(ಇಎಸ್‍ಎ)ದಿಂದ ಗಡಿಯಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಬರುವ `ಬಫರ್ ಝೋನ್’ನ್ನು ಕೈಬಿಡುವ ಮೂಲಕ ಜನಜೀವನಕ್ಕೆ ಎದುರಾಗಬಹುದಾದ ಸಂಕಷ್ಟವನ್ನು ನಿವಾರಿಸಿಕೊಡುವುದು ಆವಶ್ಯವೆಂದು ತಿಳಿಸಿದರು.
ಪಶ್ಚಿಮ ಘಟ್ಟ ಸಾಲಿನಲ್ಲಿ ಡಾ. ಕಸ್ತೂರಿ ರಂಗನ್ ವರದಿಯಲ್ಲಿನ ಇಎಸ್‍ಎ ಮತ್ತು ಬಫರ್ ಝೋನ್‍ಗಳಲ್ಲಿ ಕೆಲ ಚಟುವಟಿಕೆಗಳನ್ನು ನಡೆಸಬಾರದೆಂದು ನಿರ್ಬಂಧ ಹೇರಲಾಗಿದೆ. ಇದರಲ್ಲಿ ಕಾಫಿ `ಪಲ್ಪಿಂಗ್’ ಕೂಡ ಸೇರುತ್ತದೆ. ಯೋಜನೆಯ ಅನುಷ್ಠಾನದಿಂದ ಕಾಫಿ ಬೆಳೆಗಾರ ಸಂಕಷ್ಟಕ್ಕೆ ಸಿಲುಕಲಿರುವುದರಿಂದ, ಬೆಳೆÉಗಾರರು ಮತ್ತು ಜನರ ಜೀವನಕ್ಕೆ ಆವಶ್ಯಕವಾದ ಚಟುವಟಿಕೆಗಳಿಗೆ ಅವಕಾಶವನ್ನು ಒದಗಿಸಿಕೊಡುವ ಅಗತ್ಯವಿದೆ. ಇಂತಹ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಬೇಕೆನ್ನುವುದು ನಮ್ಮ ಆಗ್ರಹ ಪೂರ್ವಕವಾದ ಬೇಡಿಕೆಯಾಗಿದ್ದು, ಇದನ್ನು ಹೊರತುಪಡಿಸಿದಲ್ಲಿ ವರದಿಗೆ ತಮ್ಮ ವಿರೋಧವಿಲ್ಲವೆಂದು ಸ್ಪಷ್ಟಪಡಿಸಿದರು.
ಒಟ್ಟು ಆರು ರಾಜ್ಯಗಳನ್ನು ಹಾದು ಹೋಗಿರುವ ಪಶ್ಚಿಮ ಘಟ್ಟ ಸಾಲಿನ ಸಂರಕ್ಷಣೆಯ ನಿಟ್ಟಿನಲ್ಲಿಮಾಧವ ಗಾಡ್ಗಿಲ್ ಸಲ್ಲಿಸಿದ ವರದಿ ಮತ್ತು ಬಳಿಕ ಡಾ. ಕಸ್ತೂರಿ ರಂಗನ್‍ರಿಂದ ಸಲ್ಲಿಕೆಯಾದ ವರದಿಗಳ ಬಗ್ಗೆ ಮಾಹಿತಿ ನೀಡಿದ ವಿಶ್ವನಾಥ್, ಕಸ್ತೂರಿ ರಂಗನ್ ವರದಿಯಲ್ಲಿ ಶೇ.20 ರಷ್ಟು ಅರಣ್ಯ ಪ್ರದೇಶವಿರುವ ಗ್ರಾಮಗಳನ್ನು ಇಎಸ್‍ಎ ಎಂದು ಪರಿಗಣಿಸಲಾಗಿದೆ. ಅದರಂತೆ ಕೊಡಗಿನಲ್ಲಿ 53 ಗ್ರಾಮಗಳು ಇಎಸ್‍ಎ ವ್ಯಾಪ್ತಿಗೆ ಬರುತ್ತದೆ. ಈ ರೀತಿಯ ವರದಿ ಬರುವ ಹಂತದಲ್ಲಿಕೇರಳ ಹೊರತು ಪಡಿಸಿದಂತೆ ಕರ್ನಾಟಕ, ಗೋವಾ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡಿನಿಂದ ಅಗತ್ಯ ವಿರೋಧ, ತೀಕ್ಷ್ಣ ಪ್ರತಿಕ್ರಿಯೆ ಬಂದಿಲ್ಲವೆಂದು ಬೆಸರ ವ್ಯಕ್ತಪಡಿಸಿದರು.
ಇಂತಹ ಸಂದರ್ಭ ನೆರೆಯ ಕೇರಳ ಇಎಸ್‍ಎಯಡಿ ಬರುವ ಗ್ರಾಮಗಳನ್ನು ಅರಣ್ಯ, ಕಂದಾಯ, ಜಲ ಮೂಲ ಪ್ರದೇಶ, ಜನವಸತಿಯ ಪ್ರದೇಶ, ಕೃಷಿ ಚಟುವಟಿಕೆಯ ಪ್ರದೇಶವೆಂದು ವಿಂಗಡಿಸಿಕೊಂಡು, ಕೇಂದ್ರಕ್ಕೆ ಈ ಬಗ್ಗೆ ಸಮರ್ಪಕ ವರದಿಯನ್ನು ನೀಡಿತ್ತು. ಆ ಮೂಲಕ ಇಎಸ್‍ಎಗೆ ಒಳಪಡುತ್ತಿದ್ದ ತನ್ನ ರಾಜ್ಯದ 13 ಸಾವಿರ ಚದರ ಕಿ.ಮೀ. ಪ್ರದೇಶ ವ್ಯಾಪ್ತಿಯನ್ನು 8,600 ಚ.ಕಿ.ಮೀ.ಗೆ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತೆಂದು ಮಾಹಿತಿ ನೀಡಿದ ಅವರು, ಈ ಕೆಲಸ ಇಲ್ಲಿ ಸಾಧ್ಯವಾಗಿಲ್ಲವೆಂದು ತಿಳಿಸಿದರಲ್ಲದೆ, ಸ್ಥಳೀಯ ಸಮಸ್ಯೆಗಳ ಬಗೆಹರಿಕೆಗೆ ಒಕ್ಕೂಟ ಮುಖ್ಯ ಮಂತ್ರಿಗಳಾದಿಯಾಗಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಅರಣ್ಯ ಅಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿ ಮನವಿಗಳನ್ನು ನೀಡಿರುವುದಾಗಿ ತಿಳಿಸಿದರು.
ಉಚಿತ ವಿದ್ಯುತ್ ನೀಡಿ
ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಡಾ. ಎಚ್.ಟಿ. ಮೋಹನ್ ಕುಮಾರ್ ಮಾತನಾಡಿ, ಕಾಫಿ ಬೆಳೆಗಾರರ ಅನುಕೂಲಕ್ಕಾಗಿ 10 ಹೆಚ್‍ಪಿ ವರೆಗಿನ ಮೋಟಾರ್‍ಗೆ ಉಚಿತವಾಗಿ ವಿದ್ಯುತ್ ನೀಡಬೇಕೆನ್ನುವ ಬೇಡಿಕೆಗೆ ಮುಖ್ಯ ಮಂತ್ರಿಗಳು ಸಮ್ಮತಿಯನ್ನು ನೀಡಿದ್ದರೂ, ಅದು ಕಾರ್ಯರೂಪಕ್ಕೆ ಬಂದಿಲ್ಲ. ಆದಷ್ಟು ಶೀಘ್ರ ಇದನ್ನು ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಿದರು. ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ ನಂದಾ ಬೆಳ್ಳಿಯಪ್ಪ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಬಿ. ಕೃಷ್ಣಪ್ಪ, ಖಜಾಂಚಿ ಎಂ.ಬಿ. ರಾಜೀವ್, ಉಪಾಧ್ಯಕ್ಷರಾದ ಹಾಸನದ ಬಿ.ಎಂ. ನಾಗರಾಜ್, ಉಪಾಧ್ಯಕ್ಷರಾದ ಚಿಕ್ಕಮಗಳೂರು ಜಿಲ್ಲೆಯ ಎ.ಕೆ. ವಸಂತೇಗೌಡ ಸೇರಿದಂತೆ ಹಲ ಪ್ರಮುಖರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ