ರೈತರಿಗೆ ಕೇಂದ್ರ ಮನವರಿಕೆ | ಜ.8ಕ್ಕೆ ಮತ್ತೊಂದು ಸುತ್ತಿನ ಮಾತುಕತೆ ಮೂರು ಕೃಷಿ ಕಾಯ್ದೆ ವಾಪಸ್ ಪಡೆಯಲ್ಲ

ಹೊಸದಿಲ್ಲಿ: ಕೃಷಿಯಲ್ಲಿ ಮಹತ್ವದ ಸುಧಾರಣೆ ತರುವ ಮೂರು ನೂತನ ಕಾಯ್ದೆಗಳನ್ನು ಹಿಂಪಡೆಯುವುದಿಲ್ಲ ಎಂದು ರೈತರಿಗೆ ಕೇಂದ್ರ ಸರ್ಕಾರ ಮನವರಿಕೆ ಮಾಡಿದ್ದು, ಸಂಧಾನ ಕುರಿತಂತೆ ಜನವರಿ 8ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.
ರೈತ ಸಂಘಟನೆಗಳ ಸುಮಾರು 41 ನಾಯಕರು ಹಾಗೂ ಕೇಂದ್ರದ ಹಲವು ಸಚಿವರೊಂದಿಗೆ ಸೋಮವಾರ 7ನೇ ಸುತ್ತಿನ ಮಾತುಕತೆ ನಡೆದಿದ್ದು, ರೈತರ ಹಲವು ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆಯಾದರೂ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಿಲ್ಲ ಎಂದು ತಿಳಿಸಿದೆ.
ಕೃಷಿ ಕಾಯ್ದೆಯಲ್ಲಿ ಯಾವುದೇ ತಿದ್ದುಪಡಿಗೆ ಸಿದ್ಧರಿದ್ದೇವೆ. ಆದರೆ ಕೃಷಿ ಕಾಯ್ದೆ ಹಿಂಪಡೆಯುವುದಿಲ್ಲ ಎಂಬುದಾಗಿ ಸರ್ಕಾರ ತಿಳಿಸಿದೆ. ಹಾಗಾಗಿ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂಬುದಾಗಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ ಎಂದು ಮಾತುಕತೆ ಬಳಿಕ ರೈತ ನಾಯಕರೊಬ್ಬರು ತಿಳಿಸಿದ್ದಾರೆ.
ನೂತನ ಕಾಯ್ದೆಯಿಂದ ಬೆಳೆಗೆ ಸರ್ಕಾರ ನೀಡುವ ಬೆಂಬಲ ಬೆಲೆ ರದ್ದಾಗುತ್ತದೆ ಎಂಬ ವದಂತಿಯನ್ನೇ ರೈತರು ನಂಬಿದ್ದು, ಯಾವುದೇ ಕಾರಣಕ್ಕೂ ಬೆಂಬಲ ಬೆಲೆ ರದ್ದಾಗುವುದಿಲ್ಲ ಎಂಬುದಾಗಿ ಲಿಖಿತ ರೂಪದಲ್ಲಿ ಭರವಸೆ ನೀಡುತ್ತೇವೆ ಎಂದು ಸರ್ಕಾರ ತಿಳಿಸಿದೆ. ಹೀಗಿದ್ದರೂ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಹಿಂದೆ ನಡೆದ ಮಾತುಕತೆಯಲ್ಲಿ ರೈತರ ಎರಡು ಬೇಡಿಕೆಗಳಿಗೆ ಸರ್ಕಾರ ಒಪ್ಪಿದ್ದು, ಮುಂದಿನ ಸುತ್ತಿನ ಮಾತುಕತೆಯಲ್ಲಿ ಸಮಸ್ಯೆ ಬಗೆಹರಿದು ರೈತರು ಪ್ರತಿಭಟನೆ ನಿಲ್ಲಿಸುವ ಭರವಸೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ