ಚೀನಾದಿಂದ ನೆರವಿನ ನಿರೀಕ್ಷೆಯಲ್ಲಿ ಭಾರತ | ಸರಕು ವಿತರಣೆ ವಿಳಂಬ ಹಡಗಲ್ಲಿ ಸಿಲುಕಿರುವ 39 ನಾವಿಕರ ರಕ್ಷಣೆಗೆ ಕರೆ

ಹೊಸದಿಲ್ಲಿ: ಚೀನಾಗೆ ಸೇರಿದ ಸಮುದ್ರ ಪ್ರದೇಶದಲ್ಲಿ ಎರಡು ಹಡಗುಗಳಲ್ಲಿ ಸಿಲುಕಿರುವ 39 ಭಾರತೀಯ ನಾವಿಕರ ತುರ್ತು, ಪ್ರಾಯೋಗಿಕ ಮತ್ತು ಸಮಯಾನುಸಾರ ರಕ್ಷಣೆಗಾಗಿ ಭಾರತ ಶುಕ್ರವಾರ ಮನವಿ ಮಾಡಿದೆ.
ಕಳೆದ ಜೂನ್ 13ರಿಂದ ಚೀನಾದ ಹೆಬೈ ಪ್ರದೇಶದಲ್ಲಿನ ಜಿಂಗ್ಟಂಗ್ ಬಂದರಿನಲ್ಲಿ ನಿಲ್ಲಿಸಲಾಗಿದ್ದ ಭಾರತೀಯ ಬೃಹತ್ ಸರಕು ಸಾಗಣೆ ಹಡಗು ಎಂವಿ ಜಗ್ ಆನಂದ್‍ನಲ್ಲಿ 23 ಭಾರತೀಯ ನಾವಿಕರಿದ್ದಾರೆ. ಅದೇ ರೀತಿ ಕಳೆದ ಸೆ. 20ರಿಂದ ಚೀನಾದ ಕೌಫೀಡಿಯನ್ ಬಂದರಿನ ಬಳಿ ನಿಂತಿರುವ ಮತ್ತೊಂದು ಹಡಗಾದ ಎಂವಿ ಅನಾಸ್ತಾಸಿಯದಲ್ಲಿ 16 ಭಾರತೀಯ ಪ್ರಜೆಗಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ)ದ ವಕ್ತಾರ ಅನುರಾಗ್ ಶ್ರೀವಾಸ್ತವ್ ತಿಳಿಸಿದ್ದಾರೆ.
ಈ ಎರಡೂ ಹಡಗುಗಳು ತಮ್ಮ ಸರಕುಗಳ ವಿತರಣೆಗಾಗಿ ಕಾಯುತ್ತಿವೆ. ಆದರೆ, ಇದಕ್ಕೆ ತೀರಾ ವಿಳಂಬವಾಗುತ್ತಿರುವುದರಿಂದ ಹಡಗು ಸಿಬ್ಬಂದಿ ಆತಂಕಕ್ಕೊಳಗಾಗಿದ್ದಾರೆ. ಈ ಕ್ಲಿಷ್ಟಕರ ಪರಿಸ್ಥಿತಿಯಿಂದಾಗಿ ಎರಡೂ ಹಡಗು ಸಿಬ್ಬಂದಿಯನ್ನು ದುಗುಡಕ್ಕೆ ದೂಡಿದೆ ಎಂದು ಶ್ರೀವಾಸ್ತವ್ ಹೇಳಿದ್ದಾರೆ.
ಈ ಕುರಿತಂತೆ ಬೀಜಿಂಗ್‍ನಲ್ಲಿರುವ ಭಾರತೀಯ ದೂತವಾಸ ಕಚೇರಿಯು ಚೀನಾ ಅಕಾರಿಗಳೊಮದಿಗೆ ನಿರಂತರ ಸಂಪರ್ಕದಲ್ಲಿದೆ. ಈ ವಿಷಯದಲ್ಲಿ ಚೀನಾ ನೆರವು ನೀಡುವುದಾಗಿ ತಿಳಿಸಿದೆ. ಇದೇ ವೇಳೆ ಭಾರತ, ತುರ್ತು, ಪ್ರಾಯೋಗಿಕ ಮತ್ತು ಸಮಯಾನುಸಾರವಾಗಿ ಮಾನವೀಯತೆಯ ನೆಲೆಗಟ್ಟಿನಲ್ಲಿ ಈ ಸಹಾಯವನ್ನು ನಿರೀಕ್ಷಿಸುತ್ತಿದೆ ಎಂದು ಶ್ರೀವಾಸ್ತವ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ