7,725 ಕೋಟಿ ರೂ. ವೆಚ್ಚದಲ್ಲಿ ಆಂಧ್ರ, ಕರ್ನಾಟಕ ಮತ್ತು ನೋಯ್ಡಾದಲ್ಲಿ ಸ್ಥಾಪನೆ ತುಮಕೂರಲ್ಲಿ ಕೈಗಾರಿಕಾ ಕಾರಿಡಾರ್‍ಗೆ ಕೇಂದ್ರ ಅಸ್ತು

ಹೊಸದಿಲ್ಲಿ: ಕರ್ನಾಟಕದ ತುಮಕೂರಿನಲ್ಲಿ 1,701.81 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಿಸಲು ಕೇಂದ್ರ ಸಚಿವ ಸಂಪುಟ ಸಭೆಯು ಬುಧವಾರ ಅಂಗೀಕರಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿ ಸಭೆಯು, ಆಂಧ್ರ ಪ್ರದೇಶದ ಕೃಷ್ಣಪಟ್ಟಣಂ(ಅಂದಾಜು ವೆಚ್ಚ 2,139.44ಕೋಟಿ ರೂ.), ಕರ್ನಾಟಕದ ತುಮಕೂರು (ಅಂದಾಜು ವೆಚ್ಚ 1,701.81) ಮತ್ತು ಗ್ರೇಟರ್ ನೋಯ್ಡಾ (ಅಂದಾಜು ವೆಚ್ಚ 3,883.80 ಕೋಟಿ ರೂ.)ದ ಕೈಗಾರಿಕಾ ಪ್ರದೇಶದಲ್ಲಿ ಒಟ್ಟು 7,725 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗಾರಿಕಾ ಕಾರಿಡಾರ್‍ಗಳನ್ನು ಸ್ಥಾಪಿಸುವುದಕ್ಕಾಗಿ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರದ ಇಲಾಖೆಯ ಮೂರು ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ.
ವಿಶ್ವ ದರ್ಜೆಯ ಮೂಲಸೌಕರ್ಯ
ಚೆನ್ನೈ, ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆ (ಸಿಬಿಐಸಿ)ಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಲು ಕೃಷ್ಣಪಟ್ಟಣಂ ಮತ್ತು ತುಮಕೂರಿನಲ್ಲಿನ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಗ್ರೀನ್‍ಫೀಲ್ಡ್ ಕೈಗಾರಿಕಾ ನಗರಗಳು, ವಿಶ್ವಮಟ್ಟದ ಮೂಲಸೌಕರ್ಯ, ಸರಕು ಸಾಗಣೆಗಾಗಿ ರಸ್ತೆ ಮತ್ತು ರೈಲು ಸಂಪರ್ಕ ಸೇರಿದಂತೆ ಬಂದರುಗಳು ಮತ್ತು ಸರಕುಗಳಿಗೆ ಸಂಪರ್ಕ ಹೊಂದಲಿವೆ. ಇದರೊಂದಿಗೆ ವಿಶ್ವಾಸಾರ್ಹ ವಿದ್ಯುತ್ ಮತ್ತು ಗುಣಮಟ್ಟದ ಸಾಮಾಜಿಕ ಮೂಲಸೌಕರ್ಯಗಳೊಂದಿಗೆ ಸ್ವಾವಲಂಬಿಯಾಗಲಿವೆ ಎಂದು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ(ಸಿಸಿಇಎ) ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರೀನ್‍ಫೀಲ್ಡ್ ಕೈಗಾರಿಕಾ ನಗರಗಳನ್ನು ಸುಸ್ಥಿರವನ್ನಾಗಿಸಲು ದೇಶದಲ್ಲಿ ಗುಣಮಟ್ಟದ, ವಿಶ್ವಾಸಾರ್ಹ, ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ದೇಶಕ್ಕೆ ಉತ್ಪಾದನಾ ಹೂಡಿಕೆಗೆ ಅನುಕೂಲವಾಗುವಂತಹ ಅಗತ್ಯ ಸೌಲಭ್ಯಗಳನ್ನು ಕೈಗಾರಿಕೆಗಳಿಗೆ ಒದಗಿಸಲಾಗುವುದು ಎಂದು ಸಿಸಿಇಎ ಪ್ರಕಟಣೆಯಲ್ಲಿ ಹೇಳಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ