2021ರ ಏ.1ರಿಂದ ಮಾದರಸಗಳು ಸಾಮಾನ್ಯ ಶಾಲೆಗಳಾಗಿ ಮರ್ಪಾಡು ಸರ್ಕಾರಿ ಮಾದರಸ ರದ್ದುಗೊಳಿಸಲು ಅಸ್ಸಾಂ ಮಸೂದೆ

ಗುವಾಹಟಿ: ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಮಾದರಸಗಳನ್ನು ರದ್ದುಗೊಳಿಸಿ, ಅವುಗಳನ್ನು ಸಾಮಾನ್ಯ ಶಾಲೆಗಳಾಗಿ ಮಾರ್ಪಡಿಸುವ ಮಸೂದೆಯನ್ನು ಅಸ್ಸಾಂ ಸರ್ಕಾರ ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದೆ. ಇದರ ಅನ್ವಯ 2021ರ ಏಪ್ರಿಲ್ 1ರಿಂದ ಎಲ್ಲ ಸರ್ಕಾರಿ ಮಾದರಸಗಳು ಸಾಮಾನ್ಯ ಶಾಲೆಗಳಾಗಿ ಬದಲಾಗಲಿವೆ.
ಅಸ್ಸಾಂನಲ್ಲಿ ಮೂರು ದಿನಗಳ ಚಳಿಗಾಲದ ಅವೇಶನ ಆರಂಭವಾಗಿದ್ದು, ವಿಪಕ್ಷಗಳ ವಿರೋಧದ ನಡುವೆಯೇ ರಾಜ್ಯ ಸರ್ಕಾರ 2020ರ ಅಸ್ಸಾಂ ರಿಪೀಲಿಂಗ್ (ರದ್ದುಪಡಿಸುವ)ಮಸೂದೆ ಮಂಡಿಸಿದೆ.
ಈ ಮಸೂದೆಯು ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವ 1995ರ ಅಸ್ಸಾಂ ಮಾದರಸ ಶಿಕ್ಷಣ(ಪ್ರಾಂತೀಕರಣ) ಕಾಯ್ದೆ ಹಾಗೂ 2018ರ ಅಸ್ಸಾಂ ಮಾದರಸ ಶಿಕ್ಷಣ (ನೌಕರರ ಸೇವೆಗಳ ಪ್ರಾಂತೀಕರಣ ಹಾಗೂ ಮಾದರಸ ಶಿಕ್ಷಣ ಸಂಸ್ಥೆಗಳ ಮರು ಸಂಘಟನೆ )ಕಾಯ್ದೆಯನ್ನು ರದ್ದುಗೊಳಿಸಲಿದೆ. ಮುಖ್ಯವಾಗಿ ಮಸೂದೆ ಖಾಸಗಿ ಮಾದರಸಗಳನ್ನು ಸರ್ಕಾರದ ನಿಯಂತ್ರಣಕ್ಕೆ ತರುವ ಉದ್ದೇಶ ಹೊಂದಿಲ್ಲ. ಇದು ಕೇವಲ ಸರ್ಕಾರಿ ಮಾದರಸಗಳಿಗೆ ಮಾತ್ರ ಅನ್ವಯ ಎಂದು ರಾಜ್ಯ ಶಿಕ್ಷಣ ಸಚಿವ ಹಿಮಾಂತ ಬಿಸ್ವಾ ಶರ್ಮಾ ಸ್ಪಷ್ಟಪಡಿಸಿದ್ದಾರೆ.
ಮುಂದಿನ ವರ್ಷದ ಏಪ್ರಿಲ್ 1ರಿಂದ ಎಲ್ಲ ಸರ್ಕಾರಿ ಮಾದರಸಗಳನ್ನು ಪ್ರಾಥಮಿಕ, ಉನ್ನತ ಹಾಗೂ ಉನ್ನತ ದ್ವಿತೀಯ ಶಿಕ್ಷಣ ಸಂಸ್ಥೆಗಳಾಗಿ ಮಾರ್ಪಡಿಸಲಾಗುವುದು. ಆದರೆ ಶಿಕ್ಷಣ ಸಂಸ್ಥೆಗಳ ಮಾನ್ಯತೆ, ಶಿಕ್ಷಕರ ಹಾಗೂ ಇತರೆ ಸಿಬ್ಬಂದಿ ವೇತನ, ಭತ್ಯೆ ಅಥವಾ ಸಂಸ್ಥೆಯ ಸೇವೆಯಲ್ಲಾಗಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಶರ್ಮಾ ಮಾಹಿತಿ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ