ಬೆಂಗಳೂರಿನಲ್ಲಿ ಆರೋಗ್ಯ ಸೌಧ ಉದ್ಘಾಟಿಸಿ ಸಿಎಂ ಯಡಿಯೂರಪ್ಪ ಹೇಳಿಕೆ 1500 ತಜ್ಞ ವೈದ್ಯರ ಹುದ್ದೆಭರ್ತಿಗೆ ಕ್ರಮ

ಬೆಂಗಳೂರು: ರಾಜ್ಯದ ಸರ್ಕಾರ ಆಸ್ಪತ್ರೆಗಳನ್ನು ಬಲಪಡಿಸಿಲು ಖಾಲಿಯಿರುವ 1,500 ತಜ್ಞ ವೈದ್ಯರ ಹುದ್ದೆ ಭರ್ತಿಗೆ ಕ್ರಮ ಕೈಗೊಂಡಿದೆ ಎಂದು ಬಿ.ಎಸ್ ಯಡಿಯೂರಪ್ಪ ತಿಳಿಸಿದರು.
ಮಾಗಡಿ ರಸ್ತೆ ಬಳಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೂತನ ಆರೋಗ್ಯ ಸೌಧ ಕಟ್ಟಡದ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಸೌಧ ಕಟ್ಟಡವನ್ನು ಸುಮಾರು 238 ಕೋಟಿ ವೆಚ್ಚದಲ್ಲಿ 2 ಹಂತಗಳಲ್ಲಿ ನಿರ್ಮಾಣ ಮಾಡಲಾಗಿದೆ. ಈ ಮೂಲಕ ರಾಜ್ಯದ ಎಲ್ಲರಿಗೂ ಉತ್ತಮ ಆರೋಗ್ಯ ನೀಡುವುದು ಸರ್ಕಾರದ ಆಶಯವಾಗಿದೆ. ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಸುಸಜ್ಜಿತ ಕಟ್ಟಡ, ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಹೆಚ್ಚಿನ ಸಿಬ್ಬಂದಿ ಹಾಗೂ ಸೇವೆ ನೀಡಲಾಗುವುದು ಎಂದರು.
ಆಸ್ಪತ್ರೆಗೆ ಬರುವ ರೋಗಿಗಳನ್ನು ತಮ್ಮ ಮನೆ ಮಕ್ಕಳಂತೆ ಶುಶ್ರೂಷೆ ಮಾಡಿ ಚಿಕಿತ್ಸೆ ನೀಡಿದರೆ ಈ ಕಟ್ಟಡ ನಿರ್ಮಿಸಿದ್ದಕ್ಕೂ ಅರ್ಥ ಸಿಗುತ್ತದೆ. ನೀತಿ ಆಯೋಗ ಸುಸ್ಥಿರ ಆರೋಗ್ಯ ಸೂಚ್ಯಂಕದಲ್ಲಿ ಕರ್ನಾಟಕ 64 ಅಂಕ ಪಡೆದು ಆರನೇ ಸ್ಥಾನ ಪಡೆದಿದೆ ಎಂದರು.
ಕೊರೋನಾ ಯೋಧರಿಗೆ 125 ಕೋಟಿ ರೂ. ಭತ್ಯೆ
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಕೋವಿಡ್ ನಿಂದಾಗಿ ಆರ್ಥಿಕ ಸಂಕಷ್ಟ ಎದುರಾದರೂ ನಮ್ಮ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಚೈತನ್ಯ ತುಂಬುವ ಕೆಲಸ ಮಾಡುತ್ತಿದೆ. ಎಲ್ಲ  ವೈದ್ಯಕೀಯ ಕಾಲೇಜು ನಿರ್ಮಿಸುವ ಗುರಿ ಇದೆ. ರಾಜ್ಯ ಸರ್ಕಾರ 4 ಹೊಸ ವೈದ್ಯಕೀಯ ಕಾಲೇಜುಗಳಿಗೆ ಮಂಜೂರಾತಿ ನೀಡಿದ್ದು, ಈ ಪೈಕಿ ಮೂರು ಕಾಲೇಜುಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಕೂಡ ಉದ್ಘಾಟನೆಯಾಗಲಿದೆ ಎಂದರು.
ರಾಜ್ಯದಲ್ಲಿ 18 ವೈದ್ಯಕೀಯ ಕಾಲೇಜುಗಳಿವೆ. ಆದರೆ 9 ಜಿಗಳಲ್ಲಿ ಮೆಡಿಕಲ್ ಕಾಲೇಜು ಇಲ್ಲ. ಅಂತಹ ಕಡೆಗಳಲ್ಲಿ ಪಿಪಿಪಿ ಮಾದರಿ ಅಥವಾ ಬೇರೆ ಮಾದರಿಯಲ್ಲಿ ಹೊಸ ಕಾಲೇಜು ನಿರ್ಮಿಸುವ ಗುರಿ ಇದೆ. ಅದಕ್ಕೆ ಹೊಂದಿಕೊಂಡಂತೆ ಜಿಲ್ಲಾಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಕೂಡ ನಿರ್ಮಿಸಲಾಗುವುದು ಎಂದರು.
ಕೋವಿಡ್ ಸಮಯದಲ್ಲಿ ನಮ್ಮ ಸರ್ಕಾರ ಬದ್ಧತೆ ತೋರಿದೆ. ಕೊರೋನಾ ಯೋಧರಾದ ವೈದ್ಯರು, ಸಿಬ್ಬಂದಿಗೆ ಸುಮಾರು 125 ಕೋಟಿ ರೂ. ಖರ್ಚು ಮಾಡಿ ಭತ್ಯೆ ನೀಡಲಾಗುತ್ತಿದೆ ಎಂದರು.
ದೇಶದ ಜಿಡಿಪಿಯಲ್ಲಿ ಶೇ.1 ರಿಂದ 1.5 ರಷ್ಟು ಮಾತ್ರ ಆರೋಗ್ಯ ಕ್ಷೇತ್ರಕ್ಕೆ ನೀಡಲಾಗುತ್ತಿತ್ತು. ಇನ್ನು ಮುಂದೆ ಶೇ.2.5 ರಷ್ಟು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಪ್ರಧಾನಿ ಮೋದಿಯವರ ಸರ್ಕಾರ ಜಾರಿ ಮಾಡಿದ ಆಯುಷ್ಮಾನ್ ಭಾರತ್ ಯೋಜನೆ ಆರೋಗ್ಯ ಕರ್ನಾಟಕವಾಗಿ ನಮ್ಮಲ್ಲಿ ಜಾರಿಯಾಗಿದ್ದು, ಬಿಪಿಎಲ್ ಜೊತೆಗೆ ಎಪಿಎಲ್ ವರ್ಗಕ್ಕೂ ವಿಮೆ ಲಭ್ಯವಿದೆ ಎಂದು ಡಾ.ಸುಧಾಕರ್ ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ