ವಿಶ್ವಸಂಸ್ಥೆ ನಿಗದಿಪಡಿಸಿದ್ದ ಗುರಿ ಸಾಸುವಲ್ಲಿ ಮುಂದು: ಸಿಎಂ ಸುಸ್ಥಿರ ಅಭಿವೃದ್ಧಿಯಲ್ಲಿ ಕರ್ನಾಟಕಕ್ಕೆ 6ನೇ ಸ್ಥಾನ

ಬೆಂಗಳೂರು: ವಿಶ್ವಸಂಸ್ಥೆ ನೀಡಿರುವ ಸುಸ್ಥಿರ ಅಭಿವೃದ್ಧಿಯ 17 ಗುರಿಗಳ ಸಾಧನೆಯಲ್ಲಿ ಕರ್ನಾಟಕವು ದೇಶದಲ್ಲಿ 6 ನೇ ಸ್ಥಾನದಲ್ಲಿದ್ದು, ಇನ್ನಷ್ಟು ಮೇಲ್ಮಟ್ಟಕ್ಕೆ ಏರಿಸುವಂತೆ ಅಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ದೇಶನ ನೀಡಿದರು.
ಯೋಜನಾ ಇಲಾಖೆ ಸಿದ್ಧಪಡಿಸಿರುವ ಸುಸ್ಥಿರ ಅಭಿವೃದ್ಧಿ ಗುರಿಗಳ ಮುನ್ನೋಟ 2030ರ ಕ್ರಿಯಾ ಯೋಜನೆಯನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸುಸ್ಥಿರ ಅಭಿವೃದ್ಧಿ ಗುರಿಗಳ ಮುನ್ನೋಟ 2030ರ ಕಾರ್ಯತಂತ್ರ ಮತ್ತು ಕ್ರಿಯಾ ಯೋಜನೆಯು ಮುಂದಿನ 10 ವರ್ಷಗಳ ರಾಜ್ಯದಲ್ಲಿ ಸುಸ್ಥಿರ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಪೂರಕವಾದ ಮಾರ್ಗಸೂಚಿಗಳನ್ನು ಒದಗಿಸುತ್ತದೆ. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ದೃಷ್ಟಿಕೋನವನ್ನು ಅನುಷ್ಠಾನಕ್ಕೆ ತರಲು ಇದು ಸಹಕಾರಿಯಾಗಿದೆ ಎಂದರು.
ಬಜೆಟ್‍ನಲ್ಲಿ ಸುಧಾರಿತ ಕಾರ್ಯಕ್ರಮಕ್ಕೆ ಒತ್ತು:
ರಾಜ್ಯದ ಎಲ್ಲ ಜನರಿಗೆ ಉತ್ತಮ ಜೀವನೋಪಾಯ, ಸ್ವಚ್ಛ ಪರಿಸರ, ಉತ್ತಮ ಆರೋಗ್ಯ, ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ ಇತ್ಯಾದಿ ಗುರಿಗಳನ್ನು ತಲುಪಲು ಈ ಕ್ರಿಯಾ ಯೋಜನೆ ಒತ್ತು ನೀಡುತ್ತದೆ. ಹೆಚ್ಚು ಸುಧಾರಣೆಯ ಅಗತ್ಯವಿರುವ ಪ್ರದೇಶ ಮತ್ತು ಕಾರ್ಯಕ್ರಮಗಳಿಗೆ ಮುಂದಿನ ಆಯವ್ಯಯದಲ್ಲಿ ಅಗತ್ಯ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಯೋಜನಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ಪಿ. ರವಿಕುಮಾರ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ ಮತ್ತಿತರ ಹಿರಿಯ ಅಕಾರಿಗಳು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ