ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ಜೆಡಿಎಸ್ ವಿಲೀನ ಪ್ರಸ್ತಾಪವಿಲ್ಲ

ಚಿಕ್ಕಮಗಳೂರು: ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನಗೊಳ್ಳುತ್ತದೆ ಎನ್ನುವ ಯಾವುದೇ ಪ್ರಸ್ತಾವನೆ ನಮ್ಮ ಪಕ್ಷದ ಮುಂದೆ ಬಂದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಈ ಚರ್ಚೆ ಹೇಗೆ ಪ್ರಾರಂಭವಾಯಿತು ಎನ್ನುವುದು ನಮಗೆ ಗೊತ್ತಿಲ್ಲ. ವಿಲೀನ ಅಥವಾ ಹೊಂದಾಣಿಕೆಯ ಅವಶ್ಯಕತೆಯೂ ಈಗಿಲ್ಲ. ಅವರದ್ದು ಸ್ವತಂತ್ರ ಪಕ್ಷ. ಅವರು ಪಕ್ಷ ಕಟ್ಟಲು ಸಮರ್ಥರಿದ್ದಾರೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ರೀತಿಯ ಚರ್ಚೆ ಮಾಡುವುದರಿಂದ ಹಿರಿಯರಾದ ಎಚ್.ಡಿ.ದೇವೇಗೌಡ ಅವರ ಮನಸ್ಸಿಗೆ ಘಾಸಿಯಾಗುತ್ತದೆ. ಈ ಕಾರಣಕ್ಕೆ ಅನಗತ್ಯ ಚರ್ಚೆ ಅಗತ್ಯವಿಲ್ಲ ಎಂದರು.
ವಿಷಯಾಧಾರಿತವಾಗಿ ದೇಶದ ಪ್ರಶ್ನೆ ಬಂದಾಗ ಎಲ್ಲ ರಾಜಕೀಯ ಪಕ್ಷಗಳು ಒಟ್ಟಾಗಿ ನಿಲ್ಲಬೇಕು. ವೈಚಾರಿಕ ಭಿನ್ನತೆ ಪ್ರಶ್ನೆ ಬಂದಾಗ ಎದುರುಬದುರಾಗಿ ನಿಲ್ಲುವುದು ಧರ್ಮ. ಅದನ್ನು ಎಲ್ಲ ಪಕ್ಷಗಳು ಪಾಲಿಸಬೇಕು ಎಂದರು.
ಕೆಲವು ಪಕ್ಷಗಳು ದೇಶದ ಪ್ರಶ್ನೆ ಬಂದಾಗಲೂ ರಾಜಕೀಯ ಕಾರಣಕ್ಕಾಗಿ ವಿರೋಧ ಮಾಡುತ್ತವೆ. ಇದು ಅಪಾಯಕಾರಿ. ಸಮುದಾಯದ ಹಿತ ಮತ್ತು ದೇಶದ ಹಿತದ ಪ್ರಶ್ನೆ ಬಂದಾಗ ನೀವು ನಮ್ಮ ಜೊತೆ ನಿಂತುಕೊಳ್ಳಿ. ನಾವು ನಿಮ್ಮೊಂದಿಗಿರುತ್ತೇವೆ. ಇದನ್ನು ನಾವು ಜೆಡಿಎಸ್‍ನಿಂದ ನಿರೀಕ್ಷೆ ಮಾಡುತ್ತೇವೆ. ಅದು ಬಿಟ್ಟರೆ ವಿಲೀನದ ಅವಶ್ಯಕತೆ ಅವರಿಗೂ ಇಲ್ಲ. ನಮಗೂ ಇಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ