ಎರಡು ವರ್ಷದಲ್ಲಿ ದೇಶ `ಟೋಲ್ ಪ್ಲಾಜಾ ಮುಕ್ತ ‘: ಸಚಿವ ಗಡ್ಕರಿ ಇನ್ನು ಟೋಲ್‍ನಲ್ಲಿ ಇರಲ್ಲ ಕಿರಿಕಿರಿ!

ಹೊಸದಿಲ್ಲಿ: ಹೆದ್ದಾರಿಗಳಲ್ಲಿ ಪ್ರಯಾಣಿಸುವವರಿಗೆ ಸಿಹಿ ಸುದ್ದಿ ಇದು. ಹೆದ್ದಾರಿಗಳಲ್ಲಿ ಎದುರಾಗುವ ಟೋಲ್‍ಗಳಲ್ಲಿ ವಾಹನದಟ್ಟಣೆಯ ಅವಯಲ್ಲಂತೂ ಗಂಟೆಗಟ್ಟಲೇ ಕಾಲ ಕಾದು, ಕಿರಿಕಿರಿ ಎದುರಿಸುವ ಸಂದರ್ಭಗಳು ಸದ್ಯವೇ ಮಾಯವಾಗಲಿವೆ. ಮುಂದಿನ ಎರಡು ವರ್ಷಗಳಲ್ಲಿ ಇಡೀ ದೇಶ `ಟೋಲ್ ಪ್ಲಾಜಾ ಮುಕ್ತ ‘ ಸಂಚಾರ ವ್ಯವಸ್ಥೆಗೆ ತೆರೆದುಕೊಳ್ಳಲಿದೆ. ಕೇಂದ್ರ ಹೆದ್ದಾರಿ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ವಿಷಯ ಪ್ರಕಟಿಸಿದ್ದಾರೆ.
ಈಗ ಎಲ್ಲಾ ವಾಣಿಜ್ಯ ವಾಹನಗಳು ಟ್ರ್ಯಾಕಿಂಗ್ ವ್ಯವಸ್ಥೆಗೆ ಒಳಪಡುತ್ತಿವೆ. ಹಳೆಯ ವಾಹನಗಳಲ್ಲಿ ಜಿಪಿಎಸ್ ತಂತ್ರಜ್ಞಾನ ಅಳವಡಿಸಲು ಸರ್ಕಾರ ಕೆಲವು ಯೋಜನೆಗಳನ್ನು ಜಾರಿಗೊಳಿಸಲಿದೆ ಎಂದು ಗಡ್ಕರಿ ಹೇಳಿದರು.
ಅಸೋಸಿಯೆಟೆಡ್ ಛೆಂಬರ್ಸ್ ಆಫ್ ಕಾಮರ್ಸ್ ಆಫ್ ಇಂಡಿಯಾದ ಸಂಸ್ಥಾಪನಾ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಶುಕ್ರವಾರ ಮಾತನಾಡುತ್ತಿದ್ದರು. ಎಲ್ಲ ಕ್ಷೇತ್ರಗಳ ಆರ್ಥಿಕ ಪುನರುಜ್ಜೀವನಕ್ಕೆ ರಾಷ್ಟ್ರದಲ್ಲಿ ಮಾರ್ಗಗಳ ಮೂಲಸೌಕರ್ಯ ವ್ಯವಸ್ಥೆಯೇ ನಿರ್ಣಾಯಕ ಎಂದು ನಿತಿನ್ ಗಡ್ಕರಿ ತಿಳಿಸಿದರು.
ಮುಂದಿನ ಮಾರ್ಚ್ ವೇಳೆಗೆ ಹೆದ್ದಾರಿ ಸಂಗ್ರಹ 34,000 ಕೋಟಿ ರೂ. ತಲುಪಲಿದೆ. ಹೆದ್ದಾರಿ ಶುಲ್ಕ ಸಂಗ್ರಹಕ್ಕೆ ಜಿಪಿಎಸ್ ತಂತ್ರಜ್ಞಾನ ಅಳವಡಿಸಿದಲ್ಲಿ ಮುಂದಿನ ಐದು ವರ್ಷಗಳಲ್ಲಿ ಹೆದ್ದಾರಿ ಆದಾಯ 1,34,000 ಕೋಟಿ ರೂ. ತಲುಪಲಿದೆ ಎಂದು ಗಡ್ಕರಿ ಹೇಳಿದರು.
ಉದ್ಯೋಗ ಸೃಷ್ಟಿ ಮತ್ತು ಬಡತನ ನಿರ್ಮೂಲನೆಗೆ ಕೈಗಾರಿಕಾ ಅಭಿವೃದ್ಧಿಯೇ ಪ್ರಮುಖವಾಗಿದೆ. ಪ್ರಸ್ತುತ, ಉದ್ಯಮ ಮತ್ತು ಔದ್ಯೋಗಿಕ ಕ್ಷೇತ್ರವು ಮಹಾನಗರಗಳಲ್ಲಿ ಕೇಂದ್ರೀಕೃತವಾಗಿದೆ. ಬೆಳೆಯುತ್ತಿರುವ ನಗರೀಕರಣದಿಂದಾಗಿ ದಿಲ್ಲಿ, ಮುಂಬೈ, ಚೆನ್ನೈ, ಕೋಲ್ಕತ್ತಗಳಲ್ಲಿ ಗಂಭೀರ ಸಮಸ್ಯೆಯನ್ನುಂಟು ಮಾಡುತ್ತಿದೆ ಎಂದು ನಿತಿನ್ ಗಡ್ಕರಿ ಕಳವಳ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ