ನೆರೆಯಿಂದಾದ ನಷ್ಟದ ಅಂದಾಜು | ಪ್ರವಾಹ ಹಾನಿ ಕುರಿತಂತೆ ಪರಿಶೀಲನೆ ಇಂದು ಕೇಂದ್ರ ತಂಡಗಳಿಂದ ರಾಜ್ಯ ಪ್ರವಾಸ

ಬೆಂಗಳೂರು: ರಾಜ್ಯದಲ್ಲಿ ಉಂಟಾದ ಪ್ರವಾಹ ಹಾನಿ ಕುರಿತಂತೆ ಕೇಂದ್ರದ ಅಧ್ಯಯನ ತಂಡ ಬೆಂಗಳೂರಿಗೆ ಆಗಮಿಸಿದ್ದು, ಸೋಮವಾರ ಮೂರು ತಂಡಗಳಾಗಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರವಾಹ ಹಾನಿ ಪರಿಶೀಲನೆ ನಡೆಸಿ ನಷ್ಟದ ಅಂದಾಜು ಮಾಡಲಿದ್ದಾರೆ.
ಭಾನುವಾರ ಕೇಂದ್ರದ ಅಧ್ಯಯನ ತಂಡದ ಅಕಾರಿಗಳು ಜತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆ ನಡೆಸಿದ್ದು, ಪ್ರವಾಹದಿಂದ ಉಂಟಾದ ಸಮಸ್ಯೆಗಳ ಮತ್ತು ರಾಜ್ಯ ಸರ್ಕಾರ ತೆಗೆದುಕೊಂಡು ಕ್ರಮಗಳ ಬಗ್ಗೆ ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2 ಬಾರಿ ನೆರೆಹಾನಿ ಬಗ್ಗೆ ವಿಡಿಯೋ ಕಾನರೆನ್ಸ್ ಮೂಲಕ ಮಾತನಾಡಿದ್ದು, ಪರಿಸ್ಥಿತಿ ನಿಭಾಯಿಸಲು ಭರವಸೆ ನೀಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎನ್‍ಡಿಆರ್‍ಎಫ್ ನಿಯಿಂದ ನೆರೆ ನೆರವಿಗಾಗಿ 577.84 ಕೋಟಿ ರೂ. ನೀಡಿದ್ದು, ಕೇಂದ್ರದಿಂದ ಅಧ್ಯಯನ ತಂಡವನ್ನು ಕಳುಹಿಸಿದ್ದಾರೆ. ಭೀಕರ ಪ್ರವಾಹದ ನಂತರ 2 ಬಾರಿ ರಾಜ್ಯದಲ್ಲಿ ಮಳೆಯಾಗಿದೆ. ಸೆ.2 ಮತ್ತು ಅ.3ನೇ ವಾರದಲ್ಲಿ ಮಳೆಯಾಗಿದ್ದು, ಮೇಲ್ದಂಡೆಯಲ್ಲಿರುವ ಮಹಾರಾಷ್ಟ್ರದ ಜಲಾಶಯಗಳಿಂದ ಕರ್ನಾಟಕಕ್ಕೆ ಬಾರಿ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ಇದರಿಂದ ಕೃಷ್ಣಾ ಮತ್ತು ಭೀಮಾ ನದಿ ತೀರದಲ್ಲಿ ಮತ್ತೊಮ್ಮೆ ಪ್ರವಾಹ ಪರಿಸ್ಥಿತಿ ಎದುರಾಯಿತು ಎಂದರು.
ರಾಜ್ಯ ಸರ್ಕಾರ 7.12 ಲಕ್ಷ ರೈತರಿಗೆ 551.14 ಕೋಟಿ ರೂ. ಇನ್‍ಪುಟ್ ಸಬ್ಸಿಡಿ (ಸಹಾಯಧನ) ನೀಡಿದೆ. ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿದ್ದರೂ, ಮೂಲಭೂತ ಸೌಕರ್ಯ ದುರಸ್ಥಿ, ಪುನರ್ ನಿರ್ಮಾಣಕ್ಕಾಗಿ 1320.48 ಕೋಟಿ ರೂ. ಖರ್ಚು ಮಾಡಲಾಗಿದೆ. ಪ್ರವಾಹ ಹಾನಿಯಿಂದ ಸಂಪೂರ್ಣ ನಾಶವಾದ ಮನೆಗೆ 5 ಲಕ್ಷ ರೂ., ಭಾಗಶಃ ಹಾನಿಯಾದ ಮನೆಗೆ 3 ಲಕ್ಷ ರೂ., ಅಲ್ಪ ಹಾನಿಗೊಳಗಾದ ಮನೆಗೆ 50 ಸಾವಿರ ರೂ. ನೀಡಲಾಗಿದೆ. ಎಸ್‍ಡಿಆರ್‍ಎಫ್ ನಿಗದಿಪಡಿಸಿರುವ ಮೊತ್ತಕ್ಕಿಂತ ಹೆಚ್ಚು ಮೊತ್ತ ರಾಜ್ಯ ಸರ್ಕಾರ ಕೊಡುತ್ತಿದೆ. ಬರೀ ವಸತಿ ನಿರ್ಮಾಣಕ್ಕಾಗಿ 465 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು.
ರಾಜ್ಯದಲ್ಲಿ ಸಂಭವಿಸಿದ ಪ್ರವಾಹದಿಂದ ಉಂಟಾದ ಹಾನಿ ಪರಿಶೀಲಿಸಿ, ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ