ನೌಕರರ ಹಿತಾಸಕ್ತಿ ಬಲಿಗೆ ಕೋಡಿಹಳ್ಳಿ -ಕಾಂಗ್ರೆಸ್ ಚಿತಾವಣೆ: ಹಗ್ಗ ಜಗ್ಗಾಟದಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣ: ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರದ ತಿಣುಕಾಟ ಪಟ್ಟಭದ್ರರಿಂದಾಗಿ ಸರಿದಾರಿಗೆ ಬಾರದ ಸಾರಿಗೆ!

ಬೆಂಗಳೂರು: ಸಾರಿಗೆ ನೌಕರರ ಮತ್ತು ಸರ್ಕಾರದ ನಡುವಿನ ಬಿಕ್ಕಟ್ಟು ಮಧ್ಯೆ ಅಡ್ಡಗಾಲು ಹಾಕಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಸಚಿವರುಗಳು ಆಕ್ರೋಶ ಹೊರಹಾಕಿದ್ದಾರೆ.
ಸಾರಿಗೆ ನಿಗಮ ಮತ್ತು ನೌಕರರ ಸಮಸ್ಯೆ ಹೋರಾಟದ ನಡುವೆ ಕಾಲಿಟ್ಟು ಸಮಸ್ಯೆ ತಾರಕಕ್ಕೇರುವಂತೆ ಮಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ನೇರ ಆರೋಪ ಮಾಡಿದ ಪಶುಸಂಗೋಪನೆ ಹಜ್ ಮತ್ತು ವಕ್ ಸಚಿವ ಪ್ರಭು ಚವ್ಹಾಣ್, ತಮ್ಮದಲ್ಲದ ಹೋರಾಟದಲ್ಲಿ ಭಾಗಿಯಾಗಿ ಹೋರಾಟದ ಚುಕ್ಕಾಣಿ ಹಿಡಿದ ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ನೌಕರರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟಿದ್ದಾರೆ. ಇದು ಅವರ ಘನತೆಗೆ ತಕ್ಕುದಲ್ಲ ಎಂದು ಆಕ್ರೋಶ ಹೊರಹಾಕಿದರು.
ಸಮಸ್ಯೆ ಜಟಿಲಗೊಳಿಸಿದ ಚಂದ್ರು
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯಿಸಿ, ಸಾರಿಗೆ ನೌಕರರ ಪರ ಸರ್ಕಾರವಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ನೌಕರರು ಬಲಿಯಾಗಬಾರದು. ಸಾರಿಗೆ ನೌಕರರ ವಿಚಾರದಲ್ಲಿ ಮೂಗು ತುರಿಸಿಕೊಂಡು ಬರಲು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಯಾರು? ಅವರೇನು ಗುತ್ತಿಗೆ ಪಡೆದುಕೊಂಡಿದ್ದಾರೆಯೇ? ಇಂತಹ ಸಂದರ್ಭದಲ್ಲಿ ಸಮಾಧಾನಕರವಾಗಿ ಮಾತುಕತೆ ನಡೆಸಬೇಕು. ಅದುಬಿಟ್ಟು ಅವರು ಸರ್ಕಾರಕ್ಕೆ ಬೆದರಿಕೆ ಹಾಕುವುದು ಸರಿಯೇ? ಇವರು ಮಧ್ಯ ಪ್ರವೇಶ ಮಾಡದಿದ್ದಲ್ಲಿ ಎಂದೋ ಸಮಸ್ಯೆ ಬಗೆಹರಿಯುತ್ತಿತ್ತು ಎಂದು ಆರೋಪಿಸಿದರು.
ರೈತ ಪರ ಹೋರಾಟ ಮಾಡುವ ಕೋಡಿಹಳ್ಳಿ ಚಂದ್ರಶೇಖರ್ ಅವರು ಸಾರಿಗೆ ನಿಗಮ ಮತ್ತು ನೌಕರರ ಹೋರಾಟಕ್ಕೆ ಕೈಹಾಕಿ ಸಾರಿಗೆ ಮತ್ತು ನೌಕರರನ್ನು ಹಾಳುಮಾಡಬಾರದು ಎಂದ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ, ನೌಕರರ ಬೇಡಿಕೆಗಳಲ್ಲಿ ಬಹುತೇಕ ಬೇಡಿಕೆಗಳನ್ನು ಈಡೇರಿಸುತ್ತಿರುವುದು ಐತಿಹಾಸಿಕ ತೀರ್ಮಾನವಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ