*ಆರ್‍ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಘೋಷಣೆ ಇಂದಿನಿಂದ ದಿನದ 24 ತಾಸು ಆರ್‍ಟಿಜಿಎಸ್ ಸೇವೆ ಲಭ್ಯ

ಹೊಸದಿಲ್ಲಿ: ಹೆಚ್ಚಿನ ಮೌಲ್ಯದ ವಹಿವಾಟಿಗಾಗಿ ಬಳಸುವ ರಿಯಲ್ ಟೈಮ್ ಗ್ರಾಸ್ ಸೆಟಲ್‍ಮೆಂಟ್ (ಆರ್‍ಟಿಜಿಎಸ್) ವ್ಯವಸ್ಥೆಯು ಸೋಮವಾರ ಮಧ್ಯರಾತ್ರಿಯಿಂದ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಈ ಮೂಲಕ ಆರ್‍ಟಿಜಿಎಸ್ ವ್ಯವಸ್ಥೆಯನ್ನು 24*7ಗೆ ಮಾನ್ಯಗೊಳಿಸಿರುವ ಕೆಲವೇ ದೇಶಗಳ ಸಾಲಿಗೆ ಇನ್ನು ಮುಂದೆ ಭಾರತವು ಸೇರ್ಪಡೆಗೊಳ್ಳಲಿದೆ ಎಂದಿದ್ದಾರೆ.
ಈ ಹಿಂದೆ ಬೆಳಗ್ಗೆ 8ರಿಂದ ರಾತ್ರಿ 7ರ ತನಕ ಮಾತ್ರ ವಹಿವಾಟಿಗೆ ಈ ವ್ಯವಸ್ಥೆಯನ್ನು ಬಳಸಲು ಅವಕಾಶವಿತ್ತು. ಅಲ್ಲದೆ, ಎರಡನೇ ಹಾಗೂ ನಾಲ್ಕನೇ ಶನಿವಾರ, ಭಾನುವಾರ ಬಳಕೆ ಮಾಡಲು ಸಾಧ್ಯವಿರಲಿಲ್ಲ. ಆದರೀಗ ವಾರದ 7ದಿನ, ದಿನದ 24 ಗಂಟೆಯೂ ಕೂಡ ಆರ್‍ಟಿಜಿಎಸ್ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.
ಅಕ್ಟೋಬರ್‍ನಲ್ಲೇ ಆರ್‍ಟಿಜಿಎಸ್ ಸೇವೆ 24 ಗಂಟೆ ಒದಗಿಸಲು ಯೋಜಿಸಲಾಗಿದೆ ಎಂದು ಆರ್‍ಬಿಐ ಘೋಷಿಸಿತ್ತು. ಅಲ್ಲದೆ, ಡಿ.1ರಿಂದ ಇದು ಜಾರಿಯಾಗಲಿದೆ ಎಂದೂ ತಿಳಿಸಿತ್ತು. ಆದರೆ ಕೆಲವು ಅಡೆತಡೆಗಳಿಂದ ಜಾರಿ ವಿಳಂಬವಾಗಿದ್ದು, ಡಿಸೆಂಬರ್ 13ರ ಮಧ್ಯರಾತ್ರಿ ಅಂದರೆ ಸೋಮವಾರದಿಂದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ.
ಬ್ಯಾಂಕ್ ಖಾತೆಗಳಿಂದ ಆನ್‍ಲೈನ್ ಮೂಲಕ ಮಾಡುವ ಹಣವರ್ಗಾವಣೆ ಮೇಲೆ ವಿಸಿದ್ದ ಶುಲ್ಕ ಕಡಿತಗೊಳಿಸಿದ್ದ ಆರ್‍ಬಿಐ ಈಗ ಆರ್‍ಟಿಜಿಎಸ್ 24 ಗಂಟೆ ಕಾರ್ಯನಿರ್ವಹಣೆಗೆ ಅನುಮತಿಸುವ ಮೂಲಕ ಗ್ರಾಹಕರಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ.
ಫಲಾನುಭವಿಗಳ ಖಾತೆಗೆ ಸರಿಯಾದ ಅವಯಲ್ಲಿ ಹಣವರ್ಗಾವಣೆ ಖಾತರಿಪಡಿಸುವ ವ್ಯವಸ್ಥೆಯು ಸುರಕ್ಷತೆ ಹಾಗೂ ದೃಢೀಕರಣ ಕಾಯ್ದುಕೊಳ್ಳುವ ಮುಖೇನಾ, ಸಾಗರೋತ್ತರ ವಹಿವಾಟುಗಳಿಗೂ ಸಹಾಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ