ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿ ನಡೆಸಲಾಗುತ್ತಿರುವ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದು, ಬೇಡಿಕೆ ಈಡೇರುವವರೆಗೆ ಅನಿರ್ದಿಷ್ಟಾವ ಮುಷ್ಕರ ಹೂಡಲು ತೀರ್ಮಾನಿಸಲಾಗಿದೆ.
ಆಂಧ್ರಪ್ರದೇಶ ಮಾದರಿಯಲ್ಲಿ ತಮ್ಮನ್ನೂ ಸರ್ಕಾರಿ ನೌರರನ್ನಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿ ಕೆಎಸ್‍ಆರ್‍ಟಿಸಿ, ಈಶಾನ್ಯ, ವಾಯುವ್ಯ ಹಾಗೂ ಬಿಎಂಟಿಸಿ ಚಾಲಕರು ಹಾಗೂ ನಿರ್ವಾಹಕರು ಏಕಾಏಕಿ ಮುಷ್ಕರಕ್ಕಿಳಿದ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿತು. ಪರಿಣಾಮವಾಗಿ ಪ್ರಯಾಣಿಕರು ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಯಿತು.
ಇನ್ನೊಂದೆಡೆ ಮೆಟ್ರೋ ನಿಲ್ದಾಣಗಳಲ್ಲಿ ಜನರ ಓಡಾಟವೂ ಕಡಿಮೆಯಾಗಿದ್ದು, ಹೆಚ್ಚಿನ ಮೆಟ್ರೋಗಳು ಖಾಲಿಯಾಗಿ ಸಂಚರಿಸುತ್ತಿದ್ದುದು ಕಂಡುಬಂದಿತು. ಅಲ್ಲದೆ ಬೇರೆ ಜಿಲ್ಲೆಗಳಿಂದ ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಬಂದ ಹಾಗೂ ದೈನಂದಿನ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದ ಸಾರ್ವಜನಿಕರು ಬಸ್‍ನಿಲ್ದಾಣದಲ್ಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು. ಇಂತಹ ಪರಿಸ್ಥಿತಿಯನ್ನೇ ಬಂಡವಾಳವನ್ನಾಗಿಸಿದ ಆಟೋ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣಕ್ಕೆ ಬೇಡಿಕೆ ಇಡುತ್ತಿದ್ದರು.
ಕೆಎಸ್‍ಆರ್‍ಟಿಸಿ ನೌಕರರ ಸಂಘದ ಆಧ್ಯಕ್ಷ ಚಂದ್ರಪ್ಪ, ಬಿಎಂಟಿಸಿ ನೌಕರರ ಸಂಘದ ಅಧ್ಯಕ್ಷ ನಂದೀಶ್ ರೆಡ್ಡಿ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜುಂ ಫರ್ವೇಜ್ ಸೇರಿದಂತೆ ಇನ್ನಿತರ ಮುಖಂಡರೊಂದಿಗೆ ಸಾರಿಗೆ ಸಚಿವರು ಸಭೆ ನಡೆಸಿ ಅವರನ್ನು ವಿಶ್ವಾಸಕ್ಕೆ ಪಡೆಯಲು ಪ್ರಯತ್ನಿಸಿದ್ದರೂ ಜಗ್ಗದ ನೌಕರರು ಅನಿರ್ದಿಷ್ಟಾವ ಮುಷ್ಕರ ಹೂಡಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಸಾರಿಗೆ ನೌಕರರು ಸೇರಿದ್ದ ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ.