ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದ ರೈತ ಸಂಘಟನೆಗಳು

ಬೆಂಗಳೂರು: ರೈತರಿಗೆ ಸಂಬಂಸಿದ ಕಾಯಿದೆಗಳ ವಿಚಾರದಲ್ಲಿ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ಮಾಡುವುದಾಗಿ ರಾಜ್ಯಪಾಲರು ಭರವಸೆ ನೀಡಿರುವ ಹಿನ್ನೆಲೆ ರೈತ ಸಂಘಟನೆಗಳು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದಿವೆ.
ಭೂ ಸುಧಾರಣೆ ಕಾಯಿದೆ ಸೇರಿ ಇನ್ನಿತರೆ ಕಾಯಿದೆ ವಿರೋಸಿ ಕಳೆದ ಮೂರ್ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ರೈತರು ಭಾರತ್ ಬಂದ್‍ಗೂ ಬೆಂಬಲ ಸೂಚಿಸಿದ್ದರು. ಗುರುವಾರ ರಾಜ್ಯಪಾಲರು ನೀಡಿದ ಭರವಸೆಯಿಂದ ಪ್ರತಿಭಟನೆಗೆ ತಾತ್ಕಾಲಿಕವಾಗಿ ತೆರೆ ಬಿದ್ದಿದೆ.
ವಿಧಾನ ಪರಿಷತ್‍ನಲ್ಲಿ ಬಿಜೆಪಿ ಭೂಸುಧಾರಣಾ ತಿದ್ದಪಡಿ ಮಸೂದೆ 2020 ಅನ್ನು ಮಂಡಿದ್ದು, ಅದಕ್ಕೆ ಜೆಡಿಎಸ್ ಬೆಂಬಲ ನೀಡಿದ್ದರಿಂದ 37 ಮತಗಳೊಂದಿಗೆ ಅಂಗೀಕಾರಗೊಂಡಿತ್ತು. ಇದರಿಂದ ಕ್ರೋದಗೊಂಡ ಐಕ್ಯ ಹೋರಾಟ ಸಮಿತಿಯು ಗುರುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ರಾಜಭವನಕ್ಕೆ ಮುತ್ತಿಗೆ ಹಾಕಲು ರ್ಯಾಲಿ ನಡೆಯಿತು. ಪ್ರತಿಭಟನಾಕಾರನ್ನು ಪೊಲೀಸರು ಸ್ವಾತಂತ್ರ್ಯ ಉದ್ಯಾನ ಬಳಿ ತಡೆದರು.
ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ನೂಕಾಟ ಉಂಟಾಯಿತು. ಸ್ಥಳಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಆಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಇದೇ ವೇಳೆ ಸಿದ್ದರಾಮಯ್ಯ ರಾಜ್ಯ ಸರ್ಕಾರ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಸಂಜೆ ವೇಳೆಗೆ ರೈತ-ದಲಿತ-ಕಾರ್ಮಿಕ ಸಂಘಟನೆಗಳ ಐಕ್ಯಹೋರಾಟ ಸಮಿತಿಯ 20 ರೈತ ಮುಖಂಡರನ್ನು ರಾಜ್ಯಪಾಲರು ಮಾತುಕತೆಗೆ ಆಹ್ವಾನಿಸಿದರು. ರಾಜ್ಯ ರೈತ ಸಂಘದ ರಾಜಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಚಾಮರಸ ಮಾಲೀಪಾಟೀಲ, ಬಿ.ಆರ್ ಪಾಟೀಲ, ಕುರುಬೂರು ಶಾಂತಕುಮಾರ್ ಸೇರಿದಂತೆ ಹಲವರು ಭೇಟಿ ಮಾಡಿದರು.
ರೈತ ಮುಖಂಡರು ಭೂ ಸುಧಾರಣೆ ಕಾಯಿದೆಯಿಂದ ತಮಗಾಗುವ ತೊಂದರೆ ಬಗ್ಗೆ ರಾಜ್ಯಪಾಲರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯಪಾಲರು, ಮಸೂದೆ ಬಗ್ಗೆ ರೈತ ಮುಖಂಡರೊಂದಿಗೆ ವಿವರವಾಗಿ ಚರ್ಚಿಸಲು ಸರ್ಕಾರಕ್ಕೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.
ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದ ರೈತ ಮುಖಂಡ ಕುರುಬೂರು ಶಾಂತಕುಮಾರ್, ಇಂದಿನ ಸಭೆಯಲ್ಲಿ ರಾಜ್ಯಪಾಲರು ಸಕರಾತ್ಮಕವಾಗಿ ಸ್ಪಂದಿಸಿದರು. ನಮ್ಮ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡರು. ಮಸೂದೆಯ ಕುರಿತು ರೈತರೊಂದಿಗೆ ವಿವರವಾಗಿ ಚರ್ಚಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುತ್ತೇನೆ ಎಂದು ತಿಳಿಸಿರೆ ಎಂದು ತಿಳಿಸಿದರು.
ಐಕ್ಯಹೋರಾಟ ಸಮಿತಿಯ ಪರವಾಗಿ ಗುರುಪ್ರಸಾದ್ ಕೆರಗೋಡು ಮಾತನಾಡಿ, ಇಲ್ಲಿಗೆ ನಾವು ಗೆದ್ದಿದ್ದೇವೆ ಎಂದು ಸಂಭ್ರಮಿಸುವುದಿಲ್ಲ. ರಾಜ್ಯಪಾಲರು ಭರವಸೆ ನೀಡಿದರೂ ಸಹ ಮಸೂದೆ ವಾಪಸ್ ಹೋಗುವವರೆಗೂ ನಾವು ಹಿಂದೆ ಸರಿಯುವುದಿಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ