ದೇಶದಲ್ಲಿ ಕೊರೊನಾ ವೈರಸ್ ನಿಗ್ರಹಕ್ಕೆ

ಮುಂದಿನ ಕೆಲವೇ ವಾರಗಳಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ. ವರ್ಚುವಲ್ ವೇದಿಕೆ ಮುಖಾಂತರ ಸರ್ವಪಕ್ಷಗಳ ಸಭೆಯನ್ನುದ್ದೇಶಿ ಮಾತನಾಡಿದ ಅವರು, ಕೊರೊನಾ ಪಿಡುಗಿನ ವಿರುದ್ಧ ಲಸಿಕೆಯನ್ನು ಮುಂದಿನ ಕೆಲವೇ ವಾರಗಳಲ್ಲಿ ಬಿಡುಗಡೆ ಮಾಡುವ ವಿಶ್ವಾಸವನ್ನು ಭಾರತೀಯ ವಿಜ್ಞಾನಿಗಳು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ದೇಶದಲ್ಲಿ ಎಂಟು ಲಸಿಕೆಗಳ ಅಭಿವೃದ್ಧಿ ವಿವಿಧ ಹಂತದ ಮಾನವ ಪ್ರಯೋಗದಲ್ಲಿವೆ. ಸಾಂಕ್ರಾಮಿಕ ರೋಗದ ವಿರುದ್ಧ ಪರಿಣಾಮಕಾರಿ ಹಾಗೂ ದುಬಾರಿಯಲ್ಲದ ಲಸಿಕೆ ಅಭಿವೃದ್ಧಿ ವಿಚಾರದಲ್ಲಿ ಇಡೀ ವಿಶ್ವ ಭಾರತದತ್ತ ನೋಡುತ್ತಿದೆ ಎಂದು ಪ್ರಧಾನಿ ತಿಳಿಸಿದರು. ವೈಜ್ಞಾನಿಕ ಸಮುದಾಯದ ಸಾಮುದಾಯಿಕ ಪ್ರಯತ್ನಗಳಿಂದಾಗಿ ಭವಿಷ್ಯದಲ್ಲಿ ಸಾಮೂಹಿಕ ಲಸಿಕೆ ಹಾಕುವ ಕಾರ್ಯಕ್ರಮವನ್ನು ದೇಶದಲ್ಲಿ ಹಮ್ಮಿಕೊಳ್ಳಲಾಗುವುದು. ಸಂಶೋಧನಾ ವಿಜ್ಞಾನಿಗಳಿಂದ ಒಪ್ಪಿಗೆ ದೊರೆತ ನಂತರ ಲಸಿಕೆ ನೀಡುವ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು. ಸಾಮೂಹಿಕ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲು ದೇಶದಲ್ಲಿ ಅಗತ್ಯವಿರುವ ಕಾರ್ಯಜಾಲ ಲಭ್ಯವಿದೆ. ಲಸಿಕೆಯನ್ನು ಸೂಕ್ತ ರೀತಿಯಲ್ಲಿ ದಾಸ್ತಾನು ಮಾಡಲು ಶೈತ್ಯಗಾರಗಳು ಹಾಗೂ ಪೂರೈಕೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಲಸಿಕೆಯನ್ನು ಆದ್ಯತೆ ಮೇರೆಗೆ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕೊರೊನಾ ಯೋಧರಿಗೆ ನೀಡಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರದಲ್ಲಿ ಸಮಗ್ರವಾಗಿ ಲಸಿಕೆ ಹಾಕುವ ಆದ್ಯತಾಪಟ್ಟಿಯನ್ನು ಸಿದ್ಧಪಡಿಸಲಾಗುವುದೆಂದು ಪ್ರಧಾನಮಂತ್ರಿ ನರೇಂದ್ರಮೋದಿ ಸಭೆಗೆ ತಿಳಿಸಿದರು. ಸಾರ್ವಜನಿಕರ ಆರೋಗ್ಯ ರಕ್ಷಣೆಯನ್ನು ಮೊದಲ ಆದ್ಯತೆಯನ್ನಾಗಿ ಪರಿಗಣಿಸಿ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಲಸಿಕೆಯ ದರ ನಿಗದಿಪಡಿಸಲಾಗುವುದು. ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಮೊದಲ ಕೊರೊನಾ ಸೋಂಕು ಪತ್ತೆಯಾದ ನಂತರ ಅದನ್ನು ನಿಗ್ರಹಿಸುವ ನಿಟ್ಟಿನಲ್ಲಿ ಬಹಳ ದೂರ ಸಾಗಿ ಬಂದಿದ್ದೇವೆ. ಈ ವಿಚಾರದಲ್ಲಿ ಸಹಕರಿಸಿದ ಪ್ರತಿಯೊಬ್ಬರೂ ಅಭಿನಂದನಾರ್ಹರು ಎಂದರು. ಸಂಸತ್ತಿನ ಉಭಯ ಸದನಗಳ ಸದನ ನಾಯಕರು ಪಾಲ್ಗೊಂಡಿದ್ದ ಸರ್ವಪಕ್ಷಗಳ ಸಭೆ ಸುಮಾರು 3 ಗಂಟೆಗಳ ಕಾಲ ನಡೆಯಿತು. ಕೇಂದ್ರ ಸಚಿವರಾದ ಅಮಿತ್ ಷಾ, ರಾಜನಾಥ್ ಸಿಂಗ್ ಹಾಗೂ ಡಾ.ಹರ್ಷವರ್ಧನ್ ಮತ್ತಿತರರು ಉಪಸ್ಥಿತರಿದ್ದರು. ಉಭಯ ಸದನಗಳ ಕಾಂಗ್ರೆಸ್ ನಾಯಕರಾದ ಅಧೀರ್ ರಂಜನ್ ಚೌಧರಿ ಮತ್ತು ಗುಲಾಮ್ ನಬಿ ಆಜಾದ್, ಟಿಎಂಸಿ ನಾಯಕ ಸುದೀಪ್ ಬಂಡೋಪಾಧ್ಯಾಯ, ಡಿಎಂಕೆ ಮುಖಂಡ ಟಿ.ಆರ್.ಬಾಲು, ಎನ್‍ಸಿಪಿ ಮುಖಂಡ ಶರದ್ ಪವಾರ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ