ರೆಪೋ ದರವನ್ನು ಈಗಿನ ಯಥಾಸ್ಥಿತಿಯಲ್ಲೇ ಮುಂದುವರೆಸಿಕೊಂಡು ಹೋಗಲು ತೀರ್ಮಾನ

ರೆಪೋ ದರವನ್ನು ಈಗಿನ ಯಥಾಸ್ಥಿತಿಯಲ್ಲೇ ಮುಂದುವರೆಸಿಕೊಂಡು ಹೋಗಲು ತೀರ್ಮಾನಿಸಿರುವ ಆರ್‍ಬಿಐ ಈ ವಿಚಾರದಲ್ಲಿ ಯಾವುದೇ ಬದಲಾವಣೆ ಮಾಡಲು ಬಯಸಿಲ್ಲ. ಈಗಿನ ರೆಪೋ ದರ ಶೇಕಡ 4ರಷ್ಟು ಮುಂದುವರೆಯಲಿದೆ ಎಂದು ಆರ್‍ಬಿಐ ಗೌರ್ನರ್ ಡಾ.ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ರೆಪೋ ದರದ ನೀತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಹಣಕಾಸು ನೀತಿಸಮಿತಿ ಸರ್ವಾನುಮತದಿಂದ ತೀರ್ಮಾನಿಸಿದೆ ಎಂದು ಅವರು ಹೇಳಿದ್ದಾರೆ. ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯದಲ್ಲೂ ಯಾವುದೇ ಬದಲಾವಣೆ ತರದೇ ಈಗಿನ ಶೇಕಡ 4.25ರಲ್ಲಿ ಮತ್ತು ರಿವರ್ಸ್ ರೆಪೋ ದರವನ್ನು ಶೇಕಡ 3.35ರಲ್ಲಿ ಮುಂದುವರೆಸಿಕೊಂಡು ಹೋಗಲು ಆರ್‍ಬಿಐ ತೀರ್ಮಾನಿಸಿದೆ. ಪ್ರಸಕ್ತ ಆರ್ಥಿಕ ವರ್ಷದ 2ನೇ ಮಧ್ಯಂತರ ಭಾಗದಲ್ಲಿ ದೇಶದ ಆರ್ಥಿಕತೆ ಸಕಾರಾತ್ಮಕ ಪ್ರಗತಿ ಸಾಧಿಸಬಹುದು ಎಂಬ ನಿರೀಕ್ಷೆ ಆರ್‍ಬಿಐಗೆ ಇದೆ ಎಂದು ದಾಸ್ ತಿಳಿಸಿದ್ದಾರೆ ಎಂದು ನಮ್ಮ ಬಾತ್ಮೀದಾರರು ವರದಿ ಮಾಡಿದ್ದಾರೆ. ದರ ಸ್ಥಿರತೆ ಕಾಯ್ದುಕೊಳ್ಳಲು ಎದುರಾಗಿರುವ ಎಲ್ಲಾ ರೀತಿಯ ಬೆದರಿಕೆಗಳನ್ನು ಸೂಕ್ಷ್ಮವಾಗಿ ಹಣಕಾಸು ನೀತಿ ಸಮಿತಿ ಗಮನಿಸುತ್ತಿದೆ ಎಂದು ಡಾ.ದಾಸ್ ತಿಳಿಸಿದ್ದಾರೆ. ಗುಣಮಟ್ಟದ ಆಡಳಿತ ಬಿಕ್ಕಟ್ಟು ನಿರ್ವಹಣೆ ಮತ್ತು ಆಂತರಿಕ ನಿಯಂತ್ರಣಗಳನ್ನು ಕಾಯ್ದುಕೊಳ್ಳಲು ಬ್ಯಾಂಕುಗಳು ಮತ್ತು ಎನ್‍ಬಿಎಫ್‍ಸಿ ಯಂತಹ ಹಣಕಾಸು ವಲಯದ ಸಂಸ್ಥೆಗಳು ಅತ್ಯಧಿಕ ಆದ್ಯತೆ ನೀಡಬೇಕೆಂದು ಅವರು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ