ಕೊರೋನಾ ಲಸಿಕೆ ಸಂಶೋಧನಾ ಕೇಂದ್ರಗಳಿಗೆ ಪ್ರಧಾನಿ ಮೋದಿ ಭೇಟಿ ಕಾಂಗ್ರೆಸ್ ನಾಯಕ ಶ್ಲಾಘನೆ: ಅಂತರ ಕಾಯ್ದುಕೊಂಡ ಪಕ್ಷ

ಹೊಸದಿಲ್ಲಿ : ಕೋವಿಡ್-19 ಲಸಿಕೆ ಅಭಿವೃದ್ಧಿ ಕೇಂದ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿರುವುದನ್ನು ಹಿರಿಯ ಕಾಂಗ್ರೆಸ್ ನಾಯಕ ಆನಂದ ಶರ್ಮ ಶ್ಲಾಘಿಸಿದ್ದಾರೆ. ಆದರೆ ಆನಂದ್ ಶರ್ಮಾ ಅವರ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷ ಅಂತರ ಕಾಯ್ದುಕೊಂಡಿರುವುದು ಆ ಪಕ್ಷದೊಳಗಣ ಗೊಂದಲವನ್ನು ಮತ್ತೊಮ್ಮೆ ಬಯಲಿಗೆ ಬರುವಂತೆ ಮಾಡಿದೆ.
ಇದಕ್ಕೂ ಮುನ್ನ ಕಾಂಗ್ರೆಸ್ ವಕ್ತಾರ ರಣ್ದೀಪ್ ಸುರ್ಜೆವಾಲ ಅವರು ಎಂದಿನಂತೆ ಪ್ರಧಾನಿ ಮೋದಿಯವರ ನಡೆಯನ್ನು ಟೀಕಿಸಿದ್ದರು. ಆದರೆ ಇದೀಗ ಅದೇ ಪಕ್ಷದ ಮತ್ತೋರ್ವ ಹಿರಿಯ ನಾಯಕರಾಗಿರುವ ಆನಂದ್ ಶರ್ಮಾ ಅವರು ಪ್ರಧಾನಿಯವರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಧಾನಿಯವರ ಈ ಕ್ರಮ ಭಾರತೀಯ ವಿಜ್ಞಾನಿಗಳು ಮತ್ತು ಅವರ ಶ್ರಮವನ್ನು ಗುರುತಿಸುವಂತೆ ಮಾಡಿದೆ ಎಂಬುದಾಗಿ ಶ್ಲಾಘಿಸಿದ್ದರು.
ಆದರೆ ರಾಜ್ಯಸಭೆಯಲ್ಲಿ ವಿಪಕ್ಷ ಕಾಂಗ್ರೆಸ್‍ನ ಉಪನಾಯಕರಾಗಿರುವ ಆನಂದ ಶರ್ಮ ಅವರ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿರುವುದು ಅದರ ಗೊಂದಲವನ್ನು ಬಹಿರಂಗಗೊಳಿಸಿದೆ.ಆನಂದ ಶರ್ಮ ಅವರು, ಕಾಂಗ್ರೆಸ್ ಯಾಕೆ ವಿಪಕ್ಷವಾಗಿ ಸೋಲುತ್ತಿದೆ ಮತ್ತು ಪಕ್ಷ ಪುನಶ್ಚೇತನದಲ್ಲಿ ಎಲ್ಲೆಲ್ಲಿ ಎಡವುತ್ತಿದ್ದೇವೆ ಎಂಬ ಬಗ್ಗೆ ಪಕ್ಷಾಧ್ಯಕ್ಷೆ ಸೋನಿಯಾ ಗಾಂಯವರಿಗೆ ಪತ್ರ ಬರೆದ 23ಮಂದಿ ಪ್ರಮುಖ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾಗಿದ್ದಾರೆ.
ಇದರೊಂದಿಗೆ , ಕೇಂದ್ರ ಸರಕಾರ ಏನೇ ಮಾಡಿದರೂ ಅದನ್ನು ಟೀಕಿಸಲೇಬೇಕು ಎಂಬ ನಿಲುವಿನ ರಾಹುಲ್ ಗಾಂ ಮತ್ತು ಸುರ್ಜೇವಾಲ್‍ರಂತಹ ನಾಯಕರ ಒಂದು ವರ್ಗ ಮತ್ತು ಸರಕಾರದ ರಚನಾತ್ಮಕ ಕ್ರಮಗಳನ್ನು ಅನುಮೋದಿಸುವ ಆನಂದ ಶರ್ಮರಂತಹವರ ಕಾಂಗ್ರೆಸ್‍ನ ಇನ್ನೊಂದು ವರ್ಗ ಕಾಂಗ್ರೆಸ್‍ನಲ್ಲಿರುವುದು ಸ್ಪಷ್ಟವಾಗಿ ಗೋಚರಿಸತೊಡಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ