ನಿರ್ಧಾರವನ್ನು ಹಿಂತೆಗೆತ

ಬೆಂಗಳೂರು: ಖಾಸಗಿ ಶಾಲೆ ವಿದ್ಯಾರ್ಥಿಗಳು ಬಾಕಿ ಶುಲ್ಕ ಪಾವತಿ ಮಾಡದಿದ್ದರೆ ಆನ್‍ಲೈನ್ ತರಗತಿಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದ ಖಾಸಗಿ ಶಾಲೆಗಳ ಒಕ್ಕೂಟ ನಿರ್ಧಾರವನ್ನು ಹಿಂತೆಗೆದುಕೊಂಡಿದೆ.
ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬು ಕುಮಾರ್ ಖಾಸಗಿ ಶಾಲೆ ಒಕ್ಕೂಟಗಳ ಮುಖಂಡರೊಂದಿಗೆ ಸಭೆ ನಡೆಸಿದ್ದು ಒಕ್ಕೂಟದ ಮುಖಂಡರನ್ನು ಮನವೊಲಿಸುವಲ್ಲಿ ಸಫಲರಾಗಿದ್ದಾರೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್, ಖಾಸಗಿ ಶಿಕ್ಷ ಸಂಸ್ಥೆಗಳೊಂದಿಗೆ ಸಭೆ ಮಾಡಲಾಗಿದ್ದು ಒಕ್ಕೂಟದ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಶಿಕ್ಷಕರಿಗೆ ಸಂಬಳ ನೀಡುವಲ್ಲಿ ತೊಂದರೆಯಾಗುತ್ತಿರುವುದು, ಶಾಲಾ ಬಸ್ ಸಮಸ್ಯೆ, ಅಲ್ಲದೇ ಕಳೆದ ವರ್ಷದ ಎರಡನೇ ಕಂತಿನ ಶುಲ್ಕ ಕಟ್ಟಿಲ್ಲ. ಅವರು ಸಲ್ಲಿಸಿರುವ ಎಲ್ಲಾ ಮಾನವೀಯ ಅಂಶಗಳನ್ನು ಚರ್ಚೆ ನಡೆಸಿ ಸಚಿವರಿಗೆ ವರದಿ ನೀಡಲಾಗುವುದು. ಸಧ್ಯಕ್ಕೆ ಆನ್‍ಲೈನ್ ತರಗತಿ ಸ್ಥಗಿತ ಇಲ್ಲ ಎಂದರು.
ಖಾಸಗಿ ಶಾಲೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿ, ಆಯುಕ್ತರು ನಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಆನ್‍ಲೈನ್ ತರಗತಿ ಸ್ಥಗಿತ ಮಾಡುವುದಿಲ್ಲ. ಕಳೆದ ವರ್ಷ ಶುಲ್ಕ ಕಟ್ಟದೇ ಇರುವುದರಿಂದ ಸ್ಥಗಿತಗೊಳಿಸುವುದಾಗಿ ಹೇಳಿದ್ದೆವು. ಆಯುಕ್ತರು ಕಾಲಾವಕಾಶ ಕೇಳಿದ್ದಾರೆ. 1ರಿಂದ 8ನೇ ತರಗತಿವರೆಗೆ ಪರೀಕ್ಷೆ ಇಲ್ಲದೆ ಪಾಸ್ ಮಾಡಲು ಸಾಧ್ಯವಿಲ್ಲ. ಇದು ಮಗುವಿನ ಹಕ್ಕು ಉಲ್ಲಂಘನೆ ಮಾಡಿದಂತಾಗುತ್ತದೆ.ನಮಗೂ ಮಕ್ಕಳ ಹಿತಾಸಕ್ತಿ ಬಗ್ಗೆ ಕಾಳಜಿ ಇದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ