ಪ್ರಕರಣ ಇತ್ಯರ್ಥವಾಗುವ ತನಕ ಜಾಮೀನು ಮುಂದುವರಿಕೆ : ಸುಪ್ರೀಂಕೋರ್ಟ್ ಅರ್ನಾಬ್‍ಗೆ ರಿಲೀಫ್

ಹೊಸದಿಲ್ಲಿ: ಇಂಟೀರಿಯರ್ ಡಿಸೈನರ್‍ರೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವು ಬಾಂಬೆ ಹೈಕೋರ್ಟ್‍ನಲ್ಲಿ ಇತ್ಯರ್ಥವಾಗುವ ತನಕವೂ ರಿಪಬ್ಲಿಕ್ ವಾಹಿನಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಹಾಗೂ ಮತ್ತಿಬ್ಬರು ಆರೋಪಿಗಳಿಗೆ ನೀಡಲಾಗಿರುವ ಮಧ್ಯಂತರ ಜಾಮೀನು ಮುಂದುವರಿಯುತ್ತದೆ ಎಂದು ಶುಕ್ರವಾರ ಸುಪ್ರೀಂಕೋರ್ಟ್ ತಿಳಿಸಿದೆ.
ಜತೆಗೆ ನ್ಯಾಯಾಂಗ ಎಂದಿಗೂ ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿಸಿ, ಕಿರುಕುಳ ನೀಡಲು ಕಾನೂನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಎಚ್ಚರಿಸಿದೆ. ಪ್ರಕರಣ ಸಂಬಂಧ ಗೋಸ್ವಾಮಿಗೆ ನವೆಂಬರ್ 11ರಂದು ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದು, ಒಂದು ವೇಳೆ ಈಗ ಜಾಮೀನು ಕೊಡದಿದ್ದರೆ, ವ್ಯಕ್ತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯ ಹತ್ತಿಕ್ಕಿದಂತಾಗುತ್ತದೆ ಎಂದು ಹೇಳಿತ್ತು.
ಈ ಹಿನ್ನೆಲೆ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಇಂದಿರಾ ಬ್ಯಾನರ್ಜಿ ನೇತೃತ್ವದ ನ್ಯಾಯಾಪೀಠವು ಶುಕ್ರವಾರ ಅರ್ನಾಬ್ ಹಾಗೂ ಮತ್ತಿಬ್ಬರಿಗೆ ಕೋರ್ಟ್ ರಿಲೀಫ್ ನೀಡಲು ಕಾರಣವೇನು ಎಂಬುದನ್ನು ವಿವರಿಸಿದ್ದು, ಎಫ್‍ಐಆರ್ ಪರಿಶೀಲಿಸಿದಾಗ, ಅಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವೇ ಉದ್ಭವಿಸುವುದಿಲ್ಲ ಎಂದು ಹೇಳಿದೆ.
ಬಾಂಬೆ ಹೈಕೋರ್ಟ್ ಪ್ರಕರಣದ ಅರ್ಜಿ ವಿಚಾರಣೆ ಇತ್ಯರ್ಥಗೊಳಿಸಿದ ಮೇಲೂ ನಾಲ್ಕು ವಾರಗಳ ತನಕ ಮಧ್ಯಂತರ ಜಾಮೀನು ಮುಂದುವರಿಯಲಿದೆ. ರಾಜ್ಯ ಸರ್ಕಾರದಿಂದ ಅಕಾರ ದುರ್ಬಳಕೆಯಾದಾಗ ಹೈಕೋರ್ಟ್ ಹಾಗೂ ಜಿಲ್ಲಾ ಕೋರ್ಟ್‍ಗಳು ಅಗತ್ಯ ಕ್ರಮಕೈಗೊಳ್ಳಬೇಕು. ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಬೇಕು. ಆದರೆ ಕೋರ್ಟ್‍ಗಳೇ ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿಸಿ, ಕಿರುಕುಳ ನೀಡಲು ಕಾನೂನು ದುರ್ಬಳಕೆ ಮಾಡಿಕೊಳ್ಳವಾರದು ಎಂದು ಹೇಳಿದೆ.
ಜತೆಗೆ ರಾಜ್ಯ ಸರ್ಕಾರದಿಂದ ಅಕಾರ ದುರ್ಬಳಕೆಯಾಗಿದೆ ಎಂದು ಕೋರ್ಟ್‍ಗೆ ತೋರಿಸಿದ ನಾಗರಿಕರಿಗೆ ಸುಪ್ರೀಂಕೋರ್ಟ್ ಬಾಗಿಲು ಮುಚ್ಚಲು ಸಾಧ್ಯವಿಲ್ಲ ಎಂದೂ ನ್ಯಾಯಪೀಠ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ