ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸುಸ್ಥಿರ ಶಿಕ್ಷಣ: ವಿದ್ಯಾರ್ಥಿಗಳ ಶಿಕ್ಷಣೇತರ ಚಟುವಟಿಕೆ ಗುರುತಿಸಿ ಬೆಂಬಲ ಶೈಕ್ಷಣಿಕ ಸುಧಾರಣೆಗೆ ರಾಜ್ಯದ ದಿಟ್ಟ ನಡೆ

ಬೆಂಗಳೂರು; ದೇಶದಲ್ಲೇ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಶೈಕ್ಷಣಿಕ ಸುಧಾರಣೆ ಮತ್ತು ಸುಸ್ಥಿರ ಅಧ್ಯಯನಕ್ಕೆ ಇದು ನಾಂದಿಯಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಗುರುವಾರ ದಿಶಾ ಭಾರತ ಹಮ್ಮಿಕೊಂಡಿದ್ದ ನೂತನ ಶಿಕ್ಷಣ ನೀತಿ-ಜಾರಿ ಮಾಡುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಕುರಿತು ಅವರು ಮಾತನಾಡಿದರು.
21ಶತಮಾನದಲ್ಲಿ ಭಾರತವನ್ನು ಶೈಕ್ಷಣಿಕವಾಗಿ ಸುಧಾರಿಸುವ ಮಹಾತ್ವಕಾಂಕ್ಷೆ ಇದೆ. ಹೀಗಾಗಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುವುದರ ಮೂಲ ಸುಸ್ಥಿರ ಶಿಕ್ಷಣ ನೀಡುವುದು ಮುಖ್ಯವಾಗಿದೆ. ಉತ್ತಮ ಶಿಕ್ಷಣ ಸಂಸ್ಥೆ ಎಂದರೆ ವಿದ್ಯಾರ್ಥಿಗಳು ಹೆಚ್ಚು ಆಕರ್ಷಿತರಾಗುವಂತಿರಬೇಕೆಂದರು.
ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರ:
ಮೂಲ ಸೌಕರ್ಯಗಳಲ್ಲಿ ಮಾತ್ರವಲ್ಲ ಬದಲಾಗಿ ಶೈಕ್ಷಣಿಕ ಸ್ಥಿತಿಯನ್ನು ಸುಧಾರಿಸುವಲ್ಲಿ, ವಿದ್ಯಾರ್ಥಿಗಳನ್ನು ದೇಶದ ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡು ವಲ್ಲಿಯೂ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾದುದು. ವಿದ್ಯಾರ್ಥಿಯ ಶೈಕ್ಷಣಿಕ ಮತ್ತು ಶಿಕ್ಷಣೇತರ ವಿಭಿನ್ನ ಚಟುವಟಿಕೆಯನ್ನು ಗುರುತಿಸುವುದಲ್ಲದೇ ಪೊಷಕರನ್ನೂ ಇದಕ್ಕೆ ಬೆಂಂಬಲಿಸುವಂತೆ ನೋಡಿಕೊಳ್ಳಬೇಕು. ಶಿಕ್ಷಣದಲ್ಲಿ ಸಮಗ್ರತೆ ಜೊತೆಗೆ ವಿಜ್ಞಾನ,ಕಲೆ, ವಾಣಿಜ್ಯ ವಿಚಾರಗಳ ಕುರಿತ ಜ್ಞಾನವೂ ಇರಬೇಕು ಎಂದರು.
ಸ್ವಾತಂತ್ರ್ಯನಂತರ ಮೂರನೇ ಶಿಕ್ಷಣ ನೀತಿ:
ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿ ಸದಸ್ಯ ಡಾ.ಎಂ.ಕೆ.ಶ್ರೀಧರ್ ಮಾತನಾಡಿ ನೂತನ ಶಿಕ್ಷಣ ನೀತಿ ಭೂತಕಾಲ ಮತ್ತು ವರ್ತಮಾನದ ಶೈಕ್ಷಣಿಕ ವ್ಯವಸ್ಥೆಯನ್ನೊಳಗೊಂಡು ಭವಿಷ್ಯದ ಶಿಕ್ಷಣವನ್ನು ಸಮಗ್ರವಾಗಿ ಕಲಿಯುವ ವ್ಯವಸ್ಥೆಯಾಗಿದೆ. ಸ್ವಾತಂತ್ರ್ಯ ನಂತರ ಇದು ಮೂರನೇ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆಂದು ಹೇಳಿದರು.
1968ರಲ್ಲಿ ಜಾರಿಗೆ ತಂದ ಶಿಕ್ಷಣ ನೀತಿ 18 ವರ್ಷಗಳ ಕಾಲ ಇತ್ತು. ಬಳಿಕ ಬಂದ ಶಿಕ್ಷಣ ನೀತಿ 34 ವರ್ಷಗಳ ಕಾಲ ದೇಶದಲ್ಲಿದ್ದರೂ ಶಿಕ್ಷಣ ಕ್ಷೇತ್ರದಲ್ಲಿ ಅಂತಹ ಬದಲಾವಣೆಗಳೇನೂ ಆಗಿಲ್ಲ. 2020ರ ನೂತನ ಶಿಕ್ಷಣ ನೀತಿ ಇದಾಗಿದೆ. ವಿಶಾಲ ದೃಷ್ಟಿಕೋನಗಳಿಂದಲೇ ಜಾರಿಗೊಳಿಸಲಾಗುತ್ತಿದೆ. ಮುಂದಿನ 20 ವರ್ಷಗಳು ಮಾತ್ರವಲ್ಲ ಅದಕ್ಕಿಂತ ಹೊರತಾಗಿಯೂ ಪರಿಣಾಮ ಬೀರಲಿದೆ. ಪ್ರಸ್ತುತ ದೇಶದಲ್ಲಿ ಶೇ.23ರಷ್ಟು ಮಂದಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಮುಂದಿನ 20 ವರ್ಷದಲ್ಲಿ ಶೇ.50ಕ್ಕಿಂತಲೂ ಹೆಚ್ಚು ಭಾರತೀಯರು ಉನ್ನತ ಶಿಕ್ಷಣ ಪಡೆದು ಹೊರಬರಲಿದ್ದಾರೆ. ಇದು ಜಗತ್ತಿಗೆ ಜ್ಞಾನದ ಕೊಡುಗೆ ನೀಡುವ ನೀತಿಯಾಗಿದೆ ಎಂದು ತಿಳಿಸಿದರು.
ವಿಶಿಷ್ಟ ಗುರುಶಿಷ್ಯ ಪರಂಪರೆ:
ಎಐಸಿಟಿಇ ಅಧ್ಯಕ್ಷ ಡಾ.ಅನಿಲ್ ಸಹಸ್ರಬುದ್ಧೆ ಮಾತನಾಡಿ, ಮೇಕಾಲೆ ಬರುವ ಮೊದಲು ಭಾರತದಲ್ಲಿ ಗುರು ಶಿಷ್ಯರ ಪರಂಪರ ಉನ್ನತ ಮಟ್ಟದಲ್ಲಿತ್ತು. ಆಗ ಗುರು-ಶಿಷ್ಯರ ಸಂಬಂಧ ಉತ್ತಮವಾಗಿತ್ತು. ತಕ್ಷಶಿಲಾ,ನಳಂದಾ ವಿಶ್ವವಿದ್ಯಾಲಯಗಳ ಮಹತ್ವ ಹಾಗೂ ಭಾರತದ ಶಿಕ್ಷಣದದ ಬಗ್ಗೆ ಇಡೀ ಜಗತ್ತಿಗೆ ಅಭಿಮಾನವಿತ್ತು. ಆದರೆ ಮೆಕಾಲೆ ಬಂದ ಬಳಿಕ ನಮ್ಮ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಬದಲಾಯಿತು. ಇಂದು ನೂತನ ಶಿಕ್ಷಣ ನೀತಿಯ ಮೂಲಕ ಗುರು ಶಿಷ್ಯರ ಪರಂಪರೆ ಮತ್ತೆ ಜಾರಿಗೆ ಬರಲಿದೆ. ಶಿಕ್ಷಣದ ಬಗ್ಗೆ ಇರುವ ಮೂಲ ಅಭಿಪ್ರಾಯದಲ್ಲಿ ಯಾವುದೇ ಬದಲಾವಣೆಯಾಗದು ಆದರೆ ಅನೇಕ ಸುಧಾರಣೆಗಳು ಆಗಲಿವೆ ಎಂದರು.
ಪಠ್ಯೇತರ ಚಟುವಟಿಕೆ ಗುರುತಿಸಿ:
ಶಿಕ್ಷಕರು ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳನ್ನು ಗುರುತಿಸಬೇಕು. ಶಿಕ್ಷಣ ಎಂದರೆ ವಿದ್ಯಾರ್ಥಿಗಳು ಮಾತ್ರ ಕಲಿಯುವಂತಹದ್ದಲ್ಲ. ಶಿಕ್ಷಕರು ವಿದ್ಯಾರ್ಥಿಗಳು ಜೊತೆಗೂಡಿ ಕಲಿಯುವಂತಾಗಿದೆ. ತರಗತಿಯಲ್ಲಿ 60 ವಿದ್ಯಾರ್ಥಿಗಳಿದ್ದರೆ ಕೇವಲ 10 ವಿದ್ಯಾರ್ಥಿಗಳ ಹೆಸರನ್ನು ಮಾತ್ರ ಶಿಕ್ಷಕರು ತಿಳಿದಿರುತ್ತಾರೆ. ಆದರೆ ಎಲ್ಲಾ ವಿದ್ಯಾರ್ಥಿಗಳನ್ನು ಗುರುತಿಸುವಂತಾಗಬೇಕು. ಪಾಠಗಳು ತರಗತಿಗೆ ಮಾತ್ರ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಗಮನ ಕೊಡುವಂತಿರಬೇಕು. ವಿದ್ಯಾರ್ಥಿಗಳು ಹಾಜರಾತಿಗಾಗಿ ಕಾಲೇಜಿಗೆ ಬರುವ ಬದಲು ಕಾಲೇಜಿನಲ್ಲಿ ವಿಭಿನ್ನ ಕಾರ್ಯಕ್ರಮ ಆಯೋಜಿಸುತ್ತಾರೆ ಎಂಬ ಕಾರಣಕ್ಕೆ ಬರುವಂತಿರಬೇಕು. ಅಲ್ಲದೇ ಕೃಷಿ, ಕೊಳಗೇರಿ, ಸಂಶೋಧನಾ ಕೇಂದ್ರಗಳು, ವಿವಿಧ ವಿಶೇಷ ಸ್ಥಳಗಳಿಗೆ ಕರೆದುಕೊಂಡು ಹೋಗುವ ಮೂಲಕ ಹೊರಗಿನ ಜ್ಞಾನವನ್ನೂ ತಿಳಿಸುವಂತಿರಬೇಕು ಎಂದರು. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾಗೊಳಿಸುವಲ್ಲಿ ದಿಶಾ ಭಾರತದ ಪಾತ್ರ ಕುರಿತು ರೇಖಾ ರಾಮಚಂದ್ರನ್ ಉಪನ್ಯಾಸ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ