ಚಳಿಗಾಲದಲ್ಲಿ ಸೋಂಕು ಹೆಚ್ಚಳ ಸಾಧ್ಯತೆ | ಡಿಸೆಂಬರ್ ಕೊನೆವರೆಗೂ ಯಥಾಸ್ಥಿತಿ ಸದ್ಯಕ್ಕೆ ಇಲ್ಲ ಶಾಲೆ

ಬೆಂಗಳೂರು: ರಾಜ್ಯದಲ್ಲಿ ಡಿಸೆಂಬರ್ ಅಂತ್ಯದವರೆಗೂ ಶಾಲೆಗಳನ್ನು ಆರಂಭಿಸದಿರಲು ಸರ್ಕಾರ ತೀರ್ಮಾನಿಸಿದೆ.
ಮಹಾಮಾರಿ ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಸೋಮವಾರದಂದು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈಗಲೇ ಶಾಲೆಗಳನ್ನು ಆರಂಭಿಸುವುದು ಸೂಕ್ತವಲ್ಲ ಎಂಬ ಸರ್ವಸಮ್ಮತ ಅಭಿಪ್ರಾಯ ವ್ಯಕ್ತವಾಯಿತು.
ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ , ಡಿಸೆಂಬರ್ ಮೂರನೆ ವಾರದಲ್ಲಿ ಮತ್ತೊಂದು ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದೆಂದರು.
ಸೋಮವಾರ ನಡೆದ ಸಭೆಯಲ್ಲಿ ಆರೋಗ್ಯ, ಸಾರಿಗೆ, ಗ್ರಾಮೀಣಾಭಿವೃದ್ದಿ, ಸಮಾಜ ಕಲ್ಯಾಣ ಹಾಗೂ ಶಿಕ್ಷಣ ಇಲಾಖೆಯ ಪ್ರಮುಖ ಅಕಾರಿಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ಕೋವಿಡ್ ಪರಿಣಾಮ ಕುರಿತು ಆರೋಗ್ಯ ಇಲಾಖೆಯ ಸಲಹೆ ಹಾಗೂ ತಾಂತ್ರಿಕ ಸಮಿತಿ ಸರ್ಕಾರಕ್ಕೆ ನೀಡಿದ್ದ ವರದಿ ಬಗ್ಗೆ ಚರ್ಚೆ ನಡೆಯಿತು.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ರಾಜ್ಯದಲ್ಲಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ಆರಂಭ ಕುರಿತು ಎರಡು ನಿರ್ದಿಷ್ಟ ಅಭಿಪ್ರಾಯಗಳು ರೂಪುಗೊಂಡಿದ್ದವು. ಕೆಲವರು ಶಾಲೆ ಆರಂಭ ಬೇಡ ಎಂದು. ಶಾಲೆ ಆರಂಭವಾಗಿಲ್ಲವಾದರೆ ಗ್ರಾಮೀಣ ಭಾಗದ ಮಕ್ಕಳಿಗೆ ತೊಂದರೆಯಗುವ ಅಭಿಪ್ರಾಯವೂ ಕೇಳಿಬಂದಿತ್ತು. ಈಗಾಗಲೇ ಪರ್ಯಾಯ ತರಗತಿಗಳ ಬಗ್ಗೆಯೂ ಸರ್ಕಾರಕ್ಕೆ ತಿಳಿಸಿದ್ದೇವೆ. ತಾಂತ್ರಿಕ ಸಲಹಾ ಸಮಿತಿ ಚಳಿಗಾಲದಲ್ಲಿ ಕೊರೋನಾ ಹೆಚ್ಚಾಗುವ ಸಂಭವ ಇರುವುದರಿಂದ ಡಿಸೆಂಬರ್‍ನಲ್ಲಿ ಶಾಲೆ ಹಾಗೂ ಕಾಲೇಜುಗಳನ್ನು ಆರಂಭ ಮಾಡಬಾರದು ಎಂಬ ಅಭಿಪ್ರಾಯವನ್ನು ಆರೋಗ್ಯ ಇಲಾಖೆ ಕೂಡಾ ಮಂಡಿಸಿದೆ ಎಂದರು.
1ರಿಂದ 8ನೇ ತರಗತಿವರೆಗೆ ತರಗತಿ ಆರಂಭಿಸುವ ಪ್ರಸ್ತಾಪ ಇಲ್ಲ. ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಇರುವುದರಿಂದ ಡಿಸೆಂಬರ್ ಮೂರನೇ ವಾರದಲ್ಲಿ ಮತ್ತೊಮ್ಮೆ ಸಭೆ ಸೇರುವುದಾಗಿ ಎಲ್ಲಾ ಇಲಾಖೆ ಅಕಾರಿಗಳು ಸೇರಿ ಒಮ್ಮತದ ನಿರ್ಧಾರ ಕೈಗೊಂಡಿದ್ದೇವೆ. ಈಗಾಗಲೇ ಸಂವೇದ, ಚಂದನ ವಾಹಿನಿಯಲ್ಲಿ ತರಗತಿಗಳು ನಡೆಯುತ್ತಿದ್ದು ಅದು ಎಂದಿನಂತೆ ಮುಂದುವರಿಯಲಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ