ಸಾಲದ ಸುಳಿಯಲ್ಲಿ ಸರ್ಕಾರಿ ಸೌಮ್ಯದ ಕಾರ್ಖಾನೆ: 110.09 ಕೋಟಿ ರೂ. ವಿವಿಧ ಮೂಲದಿಂದ ಪಡೆದ ಸಾಲ:ಕಮರಿದ ರೈತರ ಹೋರಾಟದ ಕನಸು ಹೊರಗುತ್ತಿಗೆ ಪಾಲಾದ ಮಂಡ್ಯದ ಮೈಷುಗರ್!

ಮಂಡ್ಯ: ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಹೊರ ಗುತ್ತಿಗೆ ನೀಡುವ ಮೂಲಕ ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳುವ ಬಹುದಿನದ ಬೇಡಿಕೆಗೆ ಸರ್ಕಾರ ಎಳ್ಳು ನೀರು ಬಿಡಲು ಮುಂದಾಗಿದೆ. ಇದರೊಂದಿಗೆ ಪುನಶ್ಚೇತನಗೊಳಿಸುವರೈತರ ಕನಸು ಸಹ ಕಮರಿಹೋದಂತಾಗಿದೆ.
ರಾಜ್ಯದಲ್ಲಿರುವ ಏಕೈಕ ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆ ಉಳಿಸಿಕೊಳ್ಳುವ ಇಚ್ಛಾಶಕ್ತಿ ಪ್ರದರ್ಶಿಸದ ರಾಜ್ಯಸರ್ಕಾರ ಅಂತಿಮವಾಗಿ ಖಾಸಗಿಯವರಿಗೆ ಹೊರಗುತ್ತಿಗೆ ನೀಡಿ
ಕೈ ತೊಳೆದುಕೊಳ್ಳುವುದಕ್ಕೆ ಮುಂದಾಗಿದೆ. ಸರ್ಕಾರವೇ ಕಾರ್ಖಾನೆ ನಡೆಸುತ್ತದೆ ಎಂಬ ರೈತರ ಕನಸಿಗೆಕೊಳ್ಳಿ ಇಟ್ಟಂತಾಗಿದೆ.
ಭರವಸೆಗಳೆಲ್ಲ ಹುಸಿಯಾದವು:
2020ರ ಹೊಸ ವರ್ಷಕ್ಕೆ ಮುನ್ನಾ ದಿನ ಕಾರ್ಖಾನೆಗೆ ಭೇಟಿ ನೀಡಿದ್ದ ಸಕ್ಕರೆ ಸಚಿವ ಸಿ.ಟಿ.ರವಿ ಅವರು ಕಾರ್ಖಾನೆ ಸ್ಥಿತಿ-ಗತಿಗಳ ಕುರಿತು ಪರಿಶೀಲಿಸಿ ಕಾರ್ಖಾನೆಗೆ ಹೊಸ ಚೈತನ್ಯ ನೀಡುವ ಭರವಸೆ ಹುಟ್ಟಿಸಿದ್ದರು. ಇದಾದ ಎರಡೇ ತಿಂಗಳಲ್ಲಿ ಸಕ್ಕರೆ ಖಾತೆ ವಹಿಸಿಕೊಂಡ ಶಿವರಾಮ ಹೆಬ್ಬಾರ್, ಮೈಷುಗರ್ ಕಾರ್ಖಾನೆಯನ್ನು ಹೊರಗುತ್ತಿಗೆ ನೀಡಲು ಸಚಿವ ಸಂಪುಟ ತೀರ್ಮಾನಿಸಿರುವ ನಿರ್ಧಾರ ಪ್ರಕಟಿಸುವುದರೊಂದಿಗೆ ರೈತರ ಆಶಾಗೋಪುರವನ್ನು ಕಳಚಿದ್ದಾರೆ.
ಕೋಟಿಗಟ್ಟಲೆ ಹಣ ಬಂದರೂ ಸದೃಢವಾಗಲಿಲ್ಲ :
2008 ರಿಂದ 20019ರವರೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸರ್ಕಾರಗಳು ಕಾರ್ಖಾನೆ ಪುನಶ್ಚೇತನದ ಹೆಸರಿನಲ್ಲಿ 428.62 ಕೋಟಿ ರೂ. ಹಣ ಬಿಡುಗಡೆ ಮಾಡಿವೆ. ಆದರೂ ಮೈಷುಗರ್ ಸಾಲದ ಸುಳಿಯಿಂದ ಹೊರಬರಲಿಲ್ಲ. ಆರ್ಥಿಕವಾಗಿ ಸದೃಢತೆಯನ್ನೂ ಸಾಸಲಿಲ್ಲ. ಆರ್ಥಿಕ ಅವ್ಯವಹಾರಗಳು ನಿರಂತರವಾಗಿ ನಡೆದರೂ ಸರ್ಕಾರಗಳು ಗಂಭೀರವಾಗಿ ಪರಿಗಣಿಸಲಿಲ್ಲ. ಪರಿಣಾಮ ಕಾರ್ಖಾನೆಯ ಸ್ಥಿತಿ ಕಿಂಚಿತ್ತು ಬದಲಾಗಲೇ ಇಲ್ಲ.
ಎಚ್‍ಡಿಕೆ ಕೊಟ್ಟ 200 ಕೋಟಿಯೂ ವ್ಯರ್ಥ:
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಹೊಸ ಕಾರ್ಖಾನೆ ಸ್ಥಾಪಿಸಲು 200 ಕೋಟಿ ರೂ. ಹಣವನ್ನು ಬಜೆಟ್‍ನಲ್ಲಿ ತೆಗೆದಿರಿಸಿದ್ದರೂ ಅದೂ ಸಹ ನೆನೆಗುದಿಗೆ ಬಿದ್ದಿತ್ತು.
ಕಮರಿದ ಪುನಶ್ಚೇತನದ ಕನಸು :
ಒ ಅಂಡ್ ಎಂ ಅಥವಾ ಹೊರಗುತ್ತಿಗೆ, ಇಲ್ಲವೇ ಸರ್ಕಾರಿ ಸ್ವಾಮ್ಯದಲ್ಲೇ ನಡೆಸಬೇಕೆಂಬ ಒತ್ತಾಯಗಳು ಜನಪ್ರತಿನಿಗಳು, ರೈತ-ವಿವಿಧ ಸಂಘಟನೆಗಳ ಮುಖಂಡರಿಂದ ಕಾರ್ಖಾನೆ ಆರಂಭದ ಬಗ್ಗೆ ಭಿನ್ನಾಭಿಪ್ರಾಯಗಳುಉಂಟಾಗಿದ್ದದ್ದವು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಮಾಧುಸ್ವಾಮಿ ಎಂಟ್ಹತ್ತು ತಿಂಗಳು ಎಳೆದಾಡಿ ಅಂತಿಮವಾಗಿ ಮೈಷುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ಹೊರಗುತ್ತಿಗೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ.
ಕಂಪನಿಯನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಮಾರಾಟ ಮಾಡಲು ಬಿಡುವುದಿಲ್ಲ ಎಂಬ ಪೊಳ್ಳು ಮಾತುಗಳೊಂದಿಗೆ ರೈತರನ್ನು ನಂಬಿಸಲಾಗುತ್ತಿತ್ತು. ಕಾರ್ಖಾನೆಯನ್ನು ಸಮರ್ಥವಾಗಿ ಮುನ್ನಡೆಸಲಾಗದ ಸ್ಥಿತಿಯನ್ನು ತೋರ್ಪಡಿಸುತ್ತಲೇ ಕಂಪನಿಯನ್ನು ಜಾಣತನದಿಂದ ಖಾಸಗಿಯವರಿಗೆ ಪರಭಾರೆ ಮಾಡಿ ಜವಾಬ್ದಾರಿಯಿಂದ ಜಾರಿಕೊಳ್ಳುವ ಆಳುವ ಸರ್ಕಾರಗಳ ನಡೆ ಮೈಷುಗರ್ ಪುನಶ್ಚೇನಗೊಳ್ಳುವ ಕನಸು ಕಮರಿಹೋಗುವಂತೆ ಮಾಡಿದೆ.

ಪಿಎಸ್‍ಎಸ್ ಕೆ ಮಾದರಿ ಗುತ್ತಿಗೆ:
ಈಗಾಗಲೇ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು 40 ವರ್ಷಗಳ ಅವಗೆ ನಿರಾಣಿ ಷುಗರ್ಸ್ ಕಂಪನಿಗೆ ಗುತ್ತಿಗೆ ನೀಡಿದೆ. ಅದೇ ಮಾದರಿಯಲ್ಲೇ ಮೈಷುಗರ್ ಕಾರ್ಖಾನೆಯನ್ನೂ ಖಾಸಗಿಯವರಿಗೆ ವಹಿಸಲು ತೀರ್ಮಾನಿಸುವುದರೊಂದಿಗೆ ಕಂಪನಿಯನ್ನು ಇತಿಹಾಸ ಪುಟ ಸೇರಿಸಲು ಹೊರಟಿದೆ. ಈಗಾಗಲೇ ಕಾರ್ಖಾನೆಯ ನೌಕರರಿಗೆ ನ.20ರೊಳಗೆ ವಿಆರ್‍ಎಸ್ ಬರೆದುಕೊಡುವಂತೆ ಗಡುವು ನಿಗದಿಪಡಿಸಿರುವ ರಾಜ್ಯಸರ್ಕಾರ, ಈಗಾಗಲೇ ವಿಆರ್‍ಎಸ್ ಬರೆದುಕೊಟ್ಟಿರುವವರಿಗೆ 11 ಕೋಟಿ ರೂ.ನಷ್ಟು ಹಣ ಪಾವತಿ ಮಾಡಿದೆ. ಉಳಿದವರಿಗೆ ವರ್ಷಾಂತ್ಯದೊಳಗೆ ಪಾವತಿಸುವ ಭರವಸೆ ನೀಡಿದೆ. ಮುಂದಿನ ದಿನದಲ್ಲಿ ಮೈಷುಗರ್ ಕಾರ್ಖಾನೆಯನ್ನು ಹೊರಗುತ್ತಿಗೆ ನೀಡುವ ಪ್ರಕ್ರಿಯೆ ಆರಂಭಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ